

ಬೆಂಗಳೂರು: ಲಾರೆನ್ಸ್ ಹೈಸ್ಕೂಲ್ ಐಸಿಎಸ್ಇಯ ನಿತಾಂಶ್ ಸಿಆರ್ ಮತ್ತು ಆರ್ ಎನ್ಎಸ್ ಇಂಟರ್ ನ್ಯಾಷನಲ್ ಶಾಲೆಯ ಅನ್ನಪೂರ್ಣ ಎಸ್. ಅವರು ಎಸ್ಎಫ್ಎ ಚಾಂಪಿಯನ್ ಷಿಪ್ 2024 ರಲ್ಲಿ ಕ್ರಮವಾಗಿ 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ 600 ಮೀಟರ್ ಓಟದಲ್ಲಿ ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿದರು.
ಬಾಲಕರ 600 ಮೀಟರ್ ಓಟದಲ್ಲಿ ನಿತಾಂಶ್, ಡಿಪಿಎಸ್ ಸರ್ಜಾಪುರದ ಆರ್ಯನ್ ಶಾ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರೆ, ಗೋಪಾಲನ್ ಇಂಟರ್ ನ್ಯಾಷನಲ್ ಶಾಲೆಯ ಮಯೂರ್ ದುವೂರು ಕಂಚಿನ ಪದಕ ಗೆದ್ದರು. ಬಾಲಕಿಯರ 600 ಮೀಟರ್ ಓಟದಲ್ಲಿ ಅನ್ನಪೂರ್ಣ, ಡಿಪಿಎಸ್ ಸರ್ಜಾಪುರದ ಸಾಧ್ವಿ ರವಿಕುಮಾರ್ ಮತ್ತು ರಾಷ್ಟ್ರೀಯ ಮಿಲಿಟರಿ ಶಾಲೆಯ ಖುಷ್ಬು ಕ್ರಮವಾಗಿ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.
ಸಾಯ್ ನೇತಾಜಿ ಸುಭಾಷ್ ಸದರ್ನ್ ಸೆಂಟರ್, ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಎಕ್ಸಲೆನ್ಸ್, ಕರ್ನಾಟಕ ರಾಜ್ಯ ಹಾಕಿ ಅಸೋಸಿಯೇಷನ್ ಮತ್ತು ಫೋರ್ಸ್ 1 ಸ್ಕೇಟಿಂಗ್ ರಿಂಕ್ ಸೇರಿದಂತೆ ನಗರದಾದ್ಯಂತ ಹರಡಿರುವ ಸ್ಥಳಗಳಲ್ಲಿ ಹದಿನೆಂಟು ಸಾವಿರಕ್ಕೂ ಹೆಚ್ಚು ಉದಯೋನ್ಮುಖ ಕ್ರೀಡಾಪಟುಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುವ ಅವಕಾಶವನ್ನು ಪಡೆಯಲಿದ್ದಾರೆ.
ಸ್ಪೋರ್ಟ್ಸ್ ಫಾರ್ ಆಲ್ (ಎಸ್ಎಫ್ಎ) ತಳಮಟ್ಟದ ಕ್ರೀಡೆಗಳನ್ನು ವೃತ್ತಿಪರಗೊಳಿಸಲು ಮತ್ತು ಸಂಘಟಿಸಲು ಬದ್ಧವಾಗಿದೆ. ಜತೆಗೆ ರಾಷ್ಟ್ರವ್ಯಾಪಿ ಕ್ರೀಡೆಗಳನ್ನು ಮೌಲ್ಯೀಕರಿಸುವ ಮತ್ತು ಹೂಡಿಕೆ ಮಾಡುವ ಸಂಸ್ಕೃತಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಈ ವರ್ಷದ ಚಾಂಪಿಯನ್ ಷಿಪ್ ನವೆಂಬರ್ 22 ರವರೆಗೆ ನಡೆಯಲಿದ್ದು, ಅತ್ಯುತ್ತಮ ಪ್ರತಿಭೆಗಳ ಹುಡುಕಾಟದಲ್ಲಿ ಬೆಂಗಳೂರಿನಾದ್ಯಂತದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. 16 ವರ್ಷದೊಳಗಿನ ಬಾಲಕರ 800 ಮೀಟರ್ ಓಟದಲ್ಲಿ ಆರ್ ಎನ್ಎಸ್ ಇಂಟರ್ ನ್ಯಾಷನಲ್ ಶಾಲೆಯ ಹರ್ಷಿತ್ ಎಸ್. ಚಿನ್ನದ ಪದಕ ಗೆದ್ದಿದ್ದಾರೆ. ಆರ್ ಎನ್ಎಸ್ ಇಂಟರ್ ನ್ಯಾಷನಲ್ 17 ಚಿನ್ನ, 13 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಗೆದ್ದರೆ, ಡಿಪಿಎಸ್ ಎಲೆಕ್ಟ್ರಾನಿಕ್ ಸಿಟಿ 5 ಚಿನ್ನ, 5 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಗೆದ್ದಿದೆ.
ಎಸ್ಎಫ್ಎ ಚಾಂಪಿಯನ್ ಷಿಪ್ 2024 ಬೆಂಗಳೂರಿಗೆ ಅತ್ಯಾಕರ್ಷಕ ಸ್ಪರ್ಧೆಗಳನ್ನು ತರಲಿದೆ. ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಫುಟ್ಬಾಲ್, ಟೆನಿಸ್, ಸ್ಕ್ವಾಷ್, ಶೂಟಿಂಗ್, ಚೆಸ್, ಕಬಡ್ಡಿ, ಕರಾಟೆ, ಈಜು, ಸ್ಕೇಟಿಂಗ್, ಟೇಕ್ವಾಂಡೊ, ಖೋ ಖೋ, ಬಾಸ್ಕೆಟ್ ಬಾಲ್, ಟೇಬಲ್ ಟೆನಿಸ್, ವಾಲಿಬಾಲ್ ಮತ್ತು ಯೋಗಾಸನ ಸೇರಿದಂತೆ ವಿವಿಧ ಕ್ರೀಡೆಗಳು ಈ ಕ್ರೀಡಾಕೂಟದಲ್ಲಿ ನಡೆಯಲಿವೆ.