

ಬೆಲ್ಗ್ರೇಡ್: ಕೊರನಾ ವೈರಸ್ ಭೀತಿ ನಡುವೆಯೂ ಪ್ರದರ್ಶನ ಟೆನಿಸ್ ಟೂರ್ನಿ ಆಯೋಜಿಸಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ನೊವಾಕ್ ಜೋಕೊವಿಕ್ ಬೆಂಬಲಕ್ಕೆ ಸೆರ್ಬಿಯಾ ಪ್ರಧಾನಿ ಅನಾ ಬರ್ನಾಬಿಕ್ ನಿಂತಿದ್ದರು. ಟೂರ್ನಿಯಲ್ಲಿ ಭಾಗವಹಿಸಿದ್ದ ನಾಲ್ವರಿಗೆ ಕರೊನಾ ವೈರಸ್ ಸೋಂಕು ಹರಡಿದ್ದರಿಂದ ಜೋಕೊ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಬಳಿಕ ಜೋಕೊ ಜನರಲ್ಲಿ ಕ್ಷಮೆಯಾಚಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ, ಜೋಕೊ ದೂರಿದರೆ ಪ್ರಯೋಜನವಿಲ್ಲ. ಟೂರ್ನಿ ಆಯೋಜಿಸಲು ಅನುಮತಿ ನೀಡಿದ ನನ್ನನ್ನು ಮೊದಲು ದೂರಿ ಎಂದು ವಿಶ್ವ ನಂ.1 ಆಟಗಾರನನ್ನು ಸಮರ್ಥಿಸಿಕೊಂಡಿದ್ದಾರೆ.
ಜೋಕೊವಿಕ್ ಸಮುದಾಯಕ್ಕೆ ಉತ್ತಮ ವಾತಾವರಣ ಕಲ್ಪಿಸಿಕೊಡಲು ಪ್ರಯತ್ನಿಸಿದರು. ರಾಜಕೀಯವನ್ನು ಬದಿಗಿಡಿ, ಯುವ ಹಾಗೂ ಪ್ರತಿಭಾನ್ವಿತ ಟೆನಿಸ್ ಆಟಗಾರರಿಗೆ ಹಣ ಸಂಗ್ರಹಿಸುವ ಯೋಜನೆ ಕೂಡ ಇದಾಗಿತ್ತು ಎಂದು ಪ್ರಧಾನಿ ಅನಾ ಬರ್ನಾಬಿಕ್ ಹೇಳಿದ್ದಾರೆ. ಟೂರ್ನಿ ಆಯೋಜನೆ ಕುರಿದಂತೆ ವೈಯಕ್ತಿಕವಾಗಿ ಆರೋಪಿಸುವುದಾದರೆ, ನನ್ನನ್ನು ದೂರಿ, ಜೋಕೋ ದೂರಬೇಡಿ. ಅವರ ಕಾರ್ಯವನ್ನು ನಾನು ಮೆಚ್ಚುತ್ತೇನೆ ಎಂದಿದ್ದಾರೆ. ಇದಕ್ಕೂ ಮೊದಲು ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಸೆರ್ಬಿಯಾದ ನೆಮಾಂಜಾ ಮ್ಯಾಟಿಕ್ ಕೂಡ ಜೋಕೊ ಬೆಂಬಲಕ್ಕೆ ನಿಂತಿದ್ದರು.
ಇತ್ತೀಚೆಗೆ ಏಡ್ರಿಯಾ ಓಪನ್ ಟೆನಿಸ್ ಟೂರ್ನಿಯನ್ನು ಆಯೋಜಿಸಿದ್ದರು. ಟೂರ್ನಿಯಲ್ಲಿ ಭಾಗವಹಿಸಿದ್ದ ಗ್ರಿಗೊರ್ ಡಿಮಿಟ್ರೊವ್, ಬೊರ್ನಾ ಕಾರ್ನಿಕ್, ವಿಕ್ಟರ್ ಟ್ರಿಯೊಕಿ ಹಾಗೂ ಸ್ವತಃ ಜೋಕೊವಿಕ್ ಸೇರಿದಂತೆ ನಾಲ್ಕು ಮಂದಿ ಕೋವಿಡ್-19ರ ಸೋಂಕು ತಗುಲಿತ್ತು. ಬಳಿಕ ನಡೆಸಿದ ಪರೀಕ್ಷೆಯಲ್ಲಿ ಜೋಕೊ ಪತ್ನಿ ವರದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿತ್ತು. ಟೂರ್ನಿ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು. 4 ಮಂದಿಗೆ ಪಾಸಿಟಿವ್ ಬಂದ ಬಳಿಕ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು.