

ಬೆಂಗಳೂರು : ಸ್ಪಿನ್ನರ್ ಸುನೀಲ್ ನಾರಾಯಣ್ ವೆಸ್ಟ್ ಇಂಡೀಸ್‌ನ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ರೆಡ್ ಕಾರ್ಡ್ ಪಡೆದ ಆಟಗಾರ ಎನಿಸುವ ಮೂಲಕ ಬೇಡದ ದಾಖಲೆಗೆ ಸೇರಿದ್ದಾರೆ. ಸಿಪಿಎಲ್‌ನಲ್ಲಿ ತಂಡಗಳ ಸಮಯ ಪಾಲನೆಗಾಗಿ ರೆಡ್ ಕಾರ್ಡ್ ನಿಯಮ ಜಾರಿಗೆ ತರಲಾಗಿದ್ದು, ಫೀಲ್ಡಿಂಗ್ ಮಾಡುವ ತಂಡ ನಿಗದಿತ ಸಮಯದಲ್ಲಿ ಓವರ್ ಪೂರ್ಣಗೊಳಿಸಲು ವಿಲವಾದರೆ, ಪಂದ್ಯದ 20ನೇ ಓವರ್‌ನಲ್ಲಿ ಒಬ್ಬ ಆಟಗಾರರನ್ನು ಮೈದಾನದಿಂದ ಹೊರಕಳುಹಿಸಲಾಗುವುದು, ಹೊರಹೋಗುವ ಆಟಗಾರನನ್ನು ತಂಡದ ನಾಯಕ ಆಯ್ಕೆ ಮಾಡುತ್ತಾನೆ.
ಸೇಂಟ್ ಕಿಟ್ಸ್ ನೇವಿಸ್ ಪೆಟ್ರಿಯಾಟ್ಸ್ ಹಾಗೂ ಟ್ರ್ರಿನಿಬಾಗೊ ನೈಟ್ ರೈಡರ್ಸ್ ತಂಡದ ನಡುವಿನ ಪಂದ್ಯದಲ್ಲಿ ಈ ಘಟನೆ ಜರುಗಿದೆ. ಸೇಂಟ್ ಕೀಟ್ಸ್ ತಂಡದ ಬ್ಯಾಟಿಂಗ್ ವೇಳೆ ಸ್ಲೋ-ಓವರ್ ರೇಟ್ ಶಿಕ್ಷೆಗೆ ಗುರಿಯಾದ ಟ್ರ್ರಿನಿಬಾಗೊ ನೈಟ್ ರೈಡರ್ಸ್ ತಂಡಕ್ಕೆ 20ನೇ ಓವರ್‌ನಲ್ಲಿ ಅಂಪೈರ್ ರೆಡ್ ಕಾರ್ಡ್ ನೀಡಿದರು. ನಿಯಮದ ಪ್ರಕಾರ ತಂಡದ ಒಬ್ಬ ಆಟಗಾರನನ್ನು ಮೈದಾನದಿಂದ ಹೊರಕಳುಹಿಸಬೇಕು. ಟ್ರಿನಿಬಾಗೊ ತಂಡದ ನಾಯಕ ಕೈರಾನ್ ಪೊಲಾರ್ಡ್, ಸುನೀಲ್ ನಾರಯಣ್ ಅವರನ್ನು ಮೈದಾನದಿಂದ ಹೊರಗುಳಿಯುವಂತೆ ಸೂಚಿಸಿದರು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸೇಂಟ್ ಕೀಟ್ಸ್ ತಂಡ 5 ವಿಕೆಟ್‌ಗೆ 178 ರನ್ ಕಲೆಹಾಕಿತು. ಪ್ರತಿಯಾಗಿ ಟ್ರಿನಿಬಾಗೊ ತಂಡ 17.1 ಓವರ್‌ಗಳಲ್ಲಿ 4 ವಿಕೆಟ್‌ಗೆ 180 ರನ್ ಪೇರಿಸಿ ಸುಲಭ ಗೆಲುವು ದಾಖಲಿಸಿತು.