ಕಿವೀಸ್ ಪ್ರವಾಸ ಮುಕ್ತಾಯಕ್ಕೆ ಮುನ್ನ ಆಯ್ಕೆಗಾರರ ನೇಮಕ

madan-lal970
Published on

ನವದೆಹಲಿ: ಹಾಲಿ ನ್ಯೂಜಿಲೆಂಡ್ ಪ್ರವಾಸದ ಮುಕ್ತಾಯಕ್ಕೆ ಮುನ್ನ ರಾಷ್ಟ್ರೀಯ ಆಯ್ಕೆ ಸಮಿತಿಗೆ ಇಬ್ಬರು ಹೊಸ ಆಯ್ಕೆಗಾರರನ್ನು ನೇಮಿಸಲಾಗುವುದು ಎಂದು ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಸದಸ್ಯ ಮದನ್ ಲಾಲ್ ತಿಳಿಸಿದ್ದಾರೆ. ಮಾಜಿ ಕ್ರಿಕೆಟಿಗರಾದ ರುದ್ರಪ್ರತಾಪ್ ಸಿಂಗ್ ಮತ್ತು ಸುಲಕ್ಷಣಾ ನಾಯ್ಕ್ ಸಮಿತಿಯ ಮತ್ತಿಬ್ಬರು ಸದಸ್ಯರು. ಆಯ್ಕೆ ಸಮಿತಿಯ ನಿರ್ಗಮಿತ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಮತ್ತು ಗಗನ್ ಖೋಡ ಅವರಿಂದ ತೆರವಾದ ಸ್ಥಾನಕ್ಕೆ ಇಬ್ಬರು ಆಯ್ಕೆಗಾರರನ್ನು ನೇಮಿಸುವುದು ಹೊಸ ಸಿಎಸಿ ಮುಂದಿರುವ ಮೊದಲ ಸವಾಲಾಗಿದೆ.

ಆಯ್ಕೆಗಾರರ ಹುದ್ದೆಗೆ ಬಿಸಿಸಿಐ ಈಗಾಗಲೆ ಅರ್ಜಿ ಆಹ್ವಾನ ಪ್ರಕ್ರಿಯೆಯನ್ನು ಮುಗಿಸಿದ್ದು, 2 ಹುದ್ದೆಗಳಿಗೆ ಒಟ್ಟಾರೆ 44 ಅರ್ಜಿಗಳು ಬಂದಿವೆ ಎಂದು ಮದನ್ ಲಾಲ್ ತಿಳಿಸಿದ್ದಾರೆ. ಭಾರತ ತಂಡದ ಕಿವೀಸ್ ಪ್ರವಾಸ ಮಾರ್ಚ್ 5ರಂದು ಮುಕ್ತಾಯವಾಗಲಿದೆ. ನಂತರ ತವರಿನಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ನಡೆಯಲಿದ್ದು, ಇದಕ್ಕೆ ಹೊಸ ಆಯ್ಕೆ ಸಮಿತಿಯಿಂದಲೇ ಭಾರತ ತಂಡದ ಆಯ್ಕೆ ನಡೆಯಬೇಕಿದೆ. ಮಾಜಿ ವೇಗಿಗಳಾದ ಅಜಿತ್ ಅಗರ್ಕರ್ ಮತ್ತು ಕನ್ನಡಿಗ ವೆಂಕಟೇಶ್ ಪ್ರಸಾದ್ ಆಯ್ಕೆಗಾರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಪ್ರಮುಖರು. ಆದರೆ ಆಯ್ಕೆಗಾರರ ನೇಮಕದಲ್ಲಿ ವಲಯವಾರು ಪದ್ಧತಿಯನ್ನು ಮುಂದುವರಿಸಬೇಕೇ, ಬೇಡವೇ ಎಂಬ ಬಗ್ಗೆ ಬಿಸಿಸಿಐ ಇನ್ನೂ ಸ್ಪಷ್ಟತೆ ನೀಡಿಲ್ಲ ಎಂದು 1983ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಮದನ್ ಲಾಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net