ASIAN GAMES: ಸೀಮಾ, ಅವಿನಾಶ್​, ರಿಲೇ ತಂಡಕ್ಕೆ 4ನೇ ಸ್ಥಾನ; ಕೂದಲೆಳೆಯಲ್ಲಿ ತಪ್ಪಿದ ಪದಕ!

ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಕಂಚಿನ ಪದಕ ಜಯಿಸಿದ್ದ ಸೀಮಾ ಕಲಿರಾಮ್ನಾ ಮಹಿಳೆಯರ ಡಿಸ್ಕಸ್​ ಥ್ರೋ ಸ್ಪರ್ಧೆಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟು ಪದಕವಂಚಿತರಾದರು.
asian games
ಸೀಮಾ ಕಲಿರಾಮ್ನಾಏಜೆನ್ಸಿ
Published on: 

ಐಚಿ-ನಗೋಯಾ: ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಕಂಚಿನ ಪದಕ ಜಯಿಸಿದ್ದ ಸೀಮಾ ಕಲಿರಾಮ್ನಾ ಏಷ್ಯನ್ ಗೇಮ್ಸ್​ನ ಅಥ್ಲೆಟಿಕ್ಸ್​ನಲ್ಲಿ ಸೋಮವಾರ ನಡೆದ ಮಹಿಳೆಯರ ಡಿಸ್ಕಸ್​ ಥ್ರೋ ಸ್ಪರ್ಧೆಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟು ಪದಕವಂಚಿತರಾದರು. ಹರಿಯಾಣದ 27 ವರ್ಷದ ಸೀಮಾ 5ನೇ ಯತ್ನದಲ್ಲಿ ಜೀವನಶ್ರೇಷ್ಠ 59.88 ಮೀ. ದೂರ ಎಸೆದರೂ ಪೋಡಿಯಂ ಏರಲು ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಅವರು 3ನೇ ಸ್ಥಾನದಲ್ಲಿದ್ದರು. ಆದರೆ ಬಳಿಕ ಥಾಯ್ಲೆಂಡ್​ನ ಸುಬೆನ್ರಟ್​ ಇನ್​ಸಯೆಂಗ್​ 61.43 ಮೀ. ಎಸೆತದೊಂದಿಗೆ 3ನೇ ಸ್ಥಾನಕ್ಕೇರಿದರು. ಚೀನಾದ ಫೆಂಗ್​ ಬಿನ್​ (63.83 ಮೀ) ಚಿನ್ನ, ಜಿಯಾಂಗ್​ ಜಿಚಾವೊ (62.25 ಮೀ) ಬೆಳ್ಳಿ ಜಯಿಸಿದರು. ಸ್ಪರ್ಧೆಯಲ್ಲಿದ್ದ ಮತ್ತೋರ್ವ ಭಾರತೀಯರಾದ ಸಾನ್ಯಾ ಯಾದವ್​ 49.90 ಮೀ. ಎಸೆತದೊಂದಿಗೆ 8ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಅವಿನಾಶ್​ ಕೈತಪ್ಪಿದ ಪದಕ

ಪುರುಷರ 3 ಸಾವಿರ ಮೀ. ಸ್ಟೀಪಲ್​ಚೇಸ್​ನಲ್ಲಿ ಭಾರತದ ಅನುಭವಿ ಓಟಗಾರ ಅವಿನಾಶ್​ ಸಾಬ್ಲೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟು ಪದಕವಂಚಿತರಾದರು. ಮಹಾರಾಷ್ಟ್ರದ 32 ವರ್ಷದ ಅವಿನಾಶ್​ 8 ನಿಮಿಷ, 21.67 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿದರು. ಇದರಿಂದ ಜಪಾನ್​ ರೈಯುಜಿ ಮಿಯುರಗಿಂತ (8ನಿ, 17.36ಸೆ) ಕೇವಲ 4.31 ಸೆಕೆಂಡ್​ ಹಿನ್ನಡೆಯೊಂದಿಗೆ ಕಂಚಿನ ಪದಕ ತಪ್ಪಿಸಿಕೊಂಡರು. 2 ಬಾರಿಯ ಒಲಿಂಪಿಯನ್​ ಅವಿನಾಶ್​, 2023ರ ಏಷ್ಯಾಡ್​ನಲ್ಲಿ ಇದೇ ಸ್ಪರ್ಧೆಯಲ್ಲಿ ರಜತ ಪದಕ ಜಯಿಸಿದ್ದರು.

ರಿಲೇಯಲ್ಲೂ ನಿರಾಸೆ

ಕರ್ನಾಟಕದ ಸ್ನೇಹಾ ಎಸ್​.ಎಸ್​. ಒಳಗೊಂಡ ಭಾರತ ತಂಡ ಮಹಿಳೆಯರ 4/100 ಮೀ. ರಿಲೇ ಸ್ಪರ್ಧೆಯಲ್ಲಿ 4ನೇ ಸ್ಥಾನ ಗಳಿಸಿ ಪದಕವಂಚಿತವಾಯಿತು. ಭಾರತ 43.57 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಕೇವಲ 0.05 ಸೆಕೆಂಡ್​ಗಳಿಂದ ಪದಕ ತಪ್ಪಿಸಿಕೊಂಡಿತು. ಥಾಯ್ಲೆಂಡ್​ 43.51 ಸೆಕೆಂಡ್​ ಮತ್ತು ಜಪಾನ್​ 43.52 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಕ್ರಮವಾಗಿ ಬೆಳ್ಳಿ, ಕಂಚು ಜಯಿಸಿತು. ಚೀನಾ (42.96ಸೆ) ಚಿನ್ನ ಜಯಿಸಿತು. 4/100 ಮೀ. ಮಿಶ್ರ ರಿಲೇಯಲ್ಲಿ ಭಾರತ 3ನೇ ಸ್ಥಾನಿಯಾಗಿ ಫೈನಲ್​ಗೇರಿದ್ದು, ಪದಕ ನಿರೀಕ್ಷೆ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net