

ನವದೆಹಲಿ: ಕ್ರಿಕೆಟಿಗರೆಂದರೆ ಶ್ರೀಮಂತರು ಎಂಬುದು ಸಾಮಾನ್ಯ ನಂಬಿಕೆ. ಆದರೆ ಕ್ರಿಕೆಟಿಗರೆಲ್ಲರೂ ಲಕ್ಷ, ಕೋಟಿ ರೂ.ಗಳಲ್ಲಿ ಸಂಪಾದಿಸುವವರಲ್ಲ. ಕ್ರಿಕೆಟಿಗರಲ್ಲೂ ಬಡವರು ಇದ್ದಾರೆ. ಅಂಥ ಕೆಲ ಬಡ ದೇಶೀಯ ಕ್ರಿಕೆಟಿಗರಿಗೆ ನೆರವಾಗಲು ಭಾರತೀಯ ಕ್ರಿಕೆಟಿಗರ ಸಂಸ್ಥೆ (ಐಸಿಎ) ಮುಂದೆ ಬಂದಿದೆ. ಲೋಧಾ ಶಿಫಾರಸಿನ ಅನ್ವಯ ಕಳೆದ ವರ್ಷವಷ್ಟೇ ರಚನೆಗೊಂಡಿರುವ ಐಸಿಎ ಸ್ವತಃ ಆರ್ಥಿಕ ಮುಗ್ಗಟ್ಟಿನಲ್ಲಿರುವುದರಿಂದ, ಶ್ರೀಮಂತ ಕ್ರಿಕೆಟಿಗರಿಂದಲೇ ದೇಣಿಗೆಗಳನ್ನು ಸಂಗ್ರಹಿಸುತ್ತಿದೆ. ಇದುವರೆಗೆ 24 ಲಕ್ಷ ರೂ. ಸಂಗ್ರಹಿಸಿರುವ ಐಸಿಎ, ಮೇ 16ರವರೆಗೂ ದೇಣಿಗೆಗಳನ್ನು ಪಡೆಯುವುದನ್ನು ಮುಂದುವರಿಸುವುದಾಗಿ ತಿಳಿಸಿದೆ.
ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ ಸುಮಾರು 30 ಮಾಜಿ ರಣಜಿ ಕ್ರಿಕೆಟಿಗರ ಹೆಸರನ್ನು ಐಸಿಎ ಪಟ್ಟಿ ಮಾಡಿದ್ದು, ಮೊದಲ ಹಂತದಲ್ಲಿ ಅವರಿಗೆ ಎಲ್ಲ ರೀತಿಯ ಆರ್ಥಿಕ ನೆರವು ಒದಗಿಸಲಿದೆ. ಹೆಚ್ಚಿನ ಮೊತ್ತದ ದೇಣಿಗೆ ಸಂಗ್ರಹವಾದರೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಬಡ ಕ್ರಿಕೆಟಿಗರನ್ನು ಹುಡುಕಿ ಅವರಿಗೂ ನೆರವು ನೀಡಲಿದ್ದೇವೆ ಎಂದು ಐಸಿಎ ಅಧ್ಯಕ್ಷ ಅಶೋಕ್ ಮಲ್ಹೋತ್ರಾ ತಿಳಿಸಿದ್ದಾರೆ.
ಶುಕ್ರವಾರವಷ್ಟೇ ದೇಣಿಗೆ ಸಂಗ್ರಹಿಸುವ ಕೆಲಸ ಶುರು ಮಾಡಿರುವ ಐಸಿಎ, ಮಂಗಳವಾರದವರೆಗೆ 24 ಲಕ್ಷ ರೂ. ಸಂಗ್ರಹಿಸಿದೆ. ಈ ಪೈಕಿ 10 ಲಕ್ಷ ರೂ. ಸ್ವತಃ ಐಸಿಎ ಕೊಡುಗೆಯಾಗಿದೆ. ಉಳಿದಂತೆ ಭಾರತ ತಂಡದ ಮಾಜಿ ನಾಯಕ ಮೊಹಮದ್ ಅಜರುದ್ದೀನ್, ಮಾಜಿ ವೇಗಿ ರಾಜಿಂದರ್ ಸಿಂಗ್ ಘಾಯಿ ತಲಾ 1 ಲಕ್ಷ ರೂ. ರೂ. ದೇಣಿಗೆ ನೀಡಿದ್ದಾರೆ. ಆದರೆ ಭಾರತೀಯ ಕ್ರಿಕೆಟ್ನ ಪ್ರಮುಖ ತಾರಾ ಕ್ರಿಕೆಟಿಗರು ಇನ್ನೂ ಯಾವುದೇ ದೇಣಿಗೆಗಳನ್ನು ನೀಡಲು ಮುಂದೆ ಬಂದಿಲ್ಲ ಎಂದು ಮಲ್ಹೋತ್ರಾ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ 1,750 ಮಾಜಿ ಕ್ರಿಕೆಟಿಗರು ಐಸಿಎ ಸದಸ್ಯತ್ವ ಹೊಂದಿದ್ದು, ಎಲ್ಲರೂ ಕನಿಷ್ಠ 1 ಸಾವಿರ ರೂ. ನೀಡಬೇಕೆಂಬುದು ಆಶಯವಾಗಿದೆ. ಐಸಿಎಗೆ ಕಳೆದ ಫೆಬ್ರವರಿಯಲ್ಲಿ ಬಿಸಿಸಿಐನಿಂದ ಪ್ರಾಥಮಿಕವಾಗಿ 2 ಕೋಟಿ ರೂ. ಅನುದಾನ ಲಭಿಸಿತ್ತು. ಐಒಸಿ ಕಚೇರಿ ಬೆಂಗಳೂರಿನಲ್ಲೇ ತೆರೆಯಲಿದ್ದು, ಇದಕ್ಕಾಗಿ ಸ್ಥಳದ ಹುಡುಕಾಟ ಮಾಡಲು ಲಾಕ್ಡೌನ್ನಿಂದ ಅಡಚಣೆಯಾಗಿದೆ.
ಒಂಬುಡ್ಸ್ಮನ್ ವಿಸ್ತರಣೆ ಅಸ್ಪಷ್ಟ
ಬಿಸಿಸಿಐ ಒಂಬುಡ್ಸ್ಮನ್ ಮತ್ತು ಎಥಿಕ್ಸ್ ಅಧಿಕಾರಿ ಡಿಕೆ ಜೈನ್ ಅವರ ಅವಧಿ ವಿಸ್ತರಣೆಯ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ಇವರ ಒಂದು ವರ್ಷದ ಒಪ್ಪಂದ ಕಳೆದ ಫೆಬ್ರವರಿಯಲ್ಲಿ ಕೊನೆಗೊಂಡಿದೆ. ಆದರೆ ನಂತರದಲ್ಲಿ ಇವರನ್ನು ಮುಂದುವರಿಸುವ ಬಗ್ಗೆ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಷಾ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.
ಬಡ ಕ್ರಿಕೆಟಿಗರಿಗೆ ಬಿಸಿಸಿಐ ಹಣ ನೀಡಲ್ಲ
ಆರೋಗ್ಯ ವಿಮೆ, ನಿವೃತ್ತಿವೇತನದ ಮೂಲಕ ಬಿಸಿಸಿಐ ಮಾಜಿ ಕ್ರಿಕೆಟಿಗರಿಗೆ ನೆರವಾಗುತ್ತದೆ. ಆದರೆ 10ಕ್ಕಿಂತ ಕಡಿಮೆ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಕ್ರಿಕೆಟಿಗರಿಗೆ ಬಿಸಿಸಿಐನಿಂದ ಯಾವುದೇ ನೆರವು ಲಭಿಸುವುದಿಲ್ಲ. 25ಕ್ಕಿಂತ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದವರಿಗೆ ಮಾತ್ರ ಬಿಸಿಸಿಐ ನಿವೃತ್ತಿ ವೇತನ ನೀಡುತ್ತದೆ. ಇನ್ನು 10ಕ್ಕಿಂತ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದವರಿಗೆ ಮಾತ್ರ ಬಿಸಿಸಿಐನ ಆರೋಗ್ಯ ವಿಮೆ ಸೌಲಭ್ಯ ಲಭಿಸುತ್ತದೆ. ಹೀಗಾಗಿ 10ಕ್ಕಿಂತ ಕಡಿಮೆ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಕ್ರಿಕೆಟಿಗರು, ಆರೋಗ್ಯ ಸಮಸ್ಯೆ, ಆರ್ಥಿಕ ಸಂಕಷ್ಟ ಎದುರಾದಾಗ ಪರದಾಡಬೇಕಾಗುತ್ತದೆ. ಪ್ರಮುಖವಾಗಿ ಈಗ ಹಿರಿಯ ನಾಗರಿಕರಾಗಿರುವ ಮಾಜಿ ಕ್ರಿಕೆಟಿಗರಿಗೆ ಐಸಿಎ ನೆರವು ಒದಗಿಸಲಿದೆ. ಬಡ ಕ್ರಿಕೆಟಿಗರಿಗೆ ತಿಂಗಳಿಗೆ 25,000 ರೂ.ನಂತೆ ಹಂಚಿಕೆ ಮಾಡುವ ಯೋಚನೆ ಇದೆ ಎಂದು ಮಲ್ಹೋತ್ರಾ ತಿಳಿಸಿದ್ದಾರೆ.