ಸತತ 2ನೇ ಜಯ ದಾಖಲಿಸಿದ ಸ್ಕಾಟ್ಲೆಂಡ್ ; ಟಿ20 ವಿಶ್ವಕಪ್ ಸೂಪರ್-12 ಹಂತಕ್ಕೆ ಮತ್ತಷ್ಟು ಸನಿಹ

png and scotland for web
Published on

ಮಸ್ಕತ್: ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸತತ 2ನೇ ಜಯ ದಾಖಲಿಸಿದ ಸ್ಕಾಟ್ಲೆಂಡ್ ತಂಡ, ಸೂಪರ್-12ರ ಹಂತಕ್ಕೆ ಮತ್ತಷ್ಟು ಸನಿಹವಾಯಿತು. ಮೊದಲ ಹಣಾಹಣಿಯಲ್ಲಿ ಬಲಿಷ್ಠ ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ್ದ ಸ್ಕಾಟ್ಲೆಂಡ್ ತಂಡ ಮಂಗಳವಾರ 17 ರನ್‌ಗಳಿಂದ ಪಪುವಾ ನ್ಯೂ ಗಿನಿ (ಪಿಎನ್‌ಜಿ) ತಂಡವನ್ನು ಮಣಿಸಿತು. ಮತ್ತೊಂದೆಡೆ, ಸತತ ಎರಡನೇ ಸೋಲನುಭವಿಸಿದ ಪಿಎನ್‌ಜಿ ತಂಡ, ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಟೂರ್ನಿಯಿಂದ ಹೊರಬಿದ್ದಿತು.

ಅಲ್ ಅಮೆರಾತ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ, ಆರಂಭಿಕ ಆಘಾತದ ನಡುವೆಯೂ ರಿಚೀ ಬೆರಿಂಗ್ಟನ್ (70ರನ್, 49 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಮ್ಯಾಥ್ಯೂ ಕ್ರಾಸ್ (45ರನ್, 36 ಎಸೆತ, 2 ಬೌಂಡರಿ, 2 ಸಿಕ್ಸರ್) 3ನೇ ವಿಕೆಟ್‌ಗೆ ಪೇರಿಸಿದ 92 ರನ್ ಜತೆಯಾಟದ ಫಲವಾಗಿ 9 ವಿಕೆಟ್‌ಗೆ 165 ರನ್ ಕಲೆಹಾಕಿತು. ಬಳಿಕ ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಪಿಎನ್‌ಜಿ ತಂಡ, ಜೋಸ್ ಡೇವೆ (18ಕ್ಕೆ 4) ಮಾರಕ ದಾಳಿಗೆ ನಲುಗಿ 19.3 ಓವರ್‌ಗಳಲ್ಲಿ 148 ರನ್‌ಗಳಿಗೆ ಸರ್ವಪತನ ಕಂಡಿತು.

ಸ್ಕಾಟ್ಲೆಂಡ್: 9 ವಿಕೆಟ್‌ಗೆ 165 (ರಿಚೀ ಬೆರಿಂಗ್ಟನ್ 70, ಮ್ಯಾಥ್ಯೂ ಕ್ರಾಸ್ 45, ಜಾರ್ಜ್ ಮುನ್ಸೆ 15, ಕಬುವಾ ಮೊರೆಯಾ 31ಕ್ಕೆ 4, ಚಾದ್ ಸೊಪೆರ್ 24ಕ್ಕೆ 3), ಪಪುವಾ ನ್ಯೂ ಗಿನಿ: 19.3 ಓವರ್‌ಗಳಲ್ಲಿ 148 (ಸೆಸೆ ಬಾವೊ 24, ನೊರ್ಮನ್ ವಾನೌವಾ 47, ಕಿಪ್ಲಿನ್ ಡೊರಿಗಾ 18, ಚಾದ್ ಸೊಪೆರ್ 16, ಜೋಸ್ ಡೇವೆ 18ಕ್ಕೆ 4, ಬ್ರಾಡ್ ವೀಲ್ 41ಕ್ಕೆ 1, ಅಲಾಸ್‌ದೈರ್ ಇವಾನ್ಸ್ 22ಕ್ಕೆ 1, ಕ್ರೀಸ್ ಗ್ರೇವ್ಸ್ 31ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net