ಟಿ20 ವಿಶ್ವಕಪ್ ಸೂಪರ್-12 ಹಂತ ; ಇಂದು ಅಫ್ಘಾನಿಸ್ತಾನ-ಸ್ಕಾಟ್ಲೆಂಡ್ ಮುಖಾಮುಖಿ

scotland and afghanistan team for web
Published on

ಶಾರ್ಜಾ: ತಾಲಿಬಾಲ್ ಆಡಳಿತಕ್ಕೆ ಸಿಲುಕಿ ಸಂಕಷ್ಟದ ದಿನಗಳನ್ನು ದೂಡುತ್ತಿರುವ ತವರಿನ ಜನತೆಗೆ ಗೆಲುವಿನ ಉಡುಗೊರೆ ನೀಡಲು ಸಜ್ಜಾಗಿರುವ ಅಫ್ಘಾನಿಸ್ತಾನ ತಂಡ ಟಿ20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಹಣಾಹಣಿಯಲ್ಲಿ ಸೋಮವಾರ, ಸ್ಕಾಟ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಮೊದಲ ಸುತ್ತಿನಲ್ಲಿ ಬಲಿಷ್ಠ ಬಾಂಗ್ಲಾದೇಶ ತಂಡಕ್ಕೆ ಆಘಾತ ನೀಡಿದ್ದ ಸ್ಕಾಟ್ಲೆಂಡ್ ತಂಡ ಮತ್ತೊಂದು ಅಚ್ಚರಿ ಫಲಿತಾಂಶ ನೀಡಲು ಸಜ್ಜಾಗಿದೆ. ತಂಡದ ಆಯ್ಕೆ ಸಂಬಂಧ ಉಂಟಾದ ಗೊಂದಲದಿಂದಾಗಿ ರಶೀದ್ ಖಾನ್ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ ಮೊಹಮದ್ ನಬಿ ಸಾರಥ್ಯದಲ್ಲಿ ತಂಡ ಮುನ್ನಡೆಯಲಿದೆ.

ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಶರಣಾದರೂ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತ್ತು. ರಶೀದ್ ಖಾನ್, ನಾಯಕ ಮೊಹಮದ್ ನಬಿ ಹಾಗೂ ಮುಜೀಬ್ ಉರ್ ಜದ್ರಾನ್‌ರಂಥ ಸ್ಟಾರ್ ಬೌಲರ್‌ಗಳನ್ನು ಹೊಂದಿರುವ ಆಫ್ಘನ್ ತಂಡ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ, ಲೀಗ್ ಹಂತದಲ್ಲಿ ಅಜೇಯ ಸಾಧನೆಯೊಂದಿಗೆ ಬಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೂಪರ್ ಹಂತಕ್ಕೇರಿದ್ದು, ಅಚ್ಚರಿ ಲಿತಾಂಶ ನೀಡುವ ವಿಶ್ವಾಸದಲ್ಲಿದೆ. ಬಾಂಗ್ಲಾ ಮಣಿಸಿದ ಬಳಿಕ ಓಮನ್ ಹಾಗೂ ಪಪುವಾ ನ್ಯೂ ಗಿನಿ ತಂಡವನ್ನು ಸುಲಭವಾಗಿ ಸೋಲಿಸಿತ್ತು.

ಮುಖಾಮುಖಿ: 6, ಅಫ್ಘಾನಿಸ್ತಾನ: 6, ಸ್ಕಾಟ್ಲೆಂಡ್: 0
ಟಿ20 ವಿಶ್ವಕಪ್‌ನಲ್ಲಿ: 1, ಅಫ್ಘಾನಿಸ್ತಾನ: 1, ಸ್ಕಾಟ್ಲೆಂಡ್: 0
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net