44 ವರ್ಷಗಳ ಬಳಿಕ ಪದಕ! ತನ್ನದೇ ಹಳೆಯ ದಾಖಲೆ ಮುರಿದು ಬೆಳ್ಳಿಗೆ ಮುತ್ತಿಟ್ಟ ಸಾವನ್​ ಬರ್ವಾಲ್​ | Asian Games

ಜಪಾನ್‌ನ ಇಚಿಟಕಾ ಯಮಾಶಿತಾ 2:10:49 ಸಮಯದೊಂದಿಗೆ ಚಿನ್ನದ ಪದಕ ಗೆದ್ದರೆ, ಚೀನಾದ ಪೆಯು ಫೆಂಗ್ 2:12:13 ಸಮಯ ರೆಕಾರ್ಡ್​ ಮಾಡಿ ಕಂಚಿಗೆ ಮುತ್ತಿಟ್ಟಿದ್ದಾರೆ.
Asian Games
44 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯ! ತನ್ನದೇ ಹಳೆಯ ದಾಖಲೆ ಮುರಿದು ಬೆಳ್ಳಿಗೆ ಮುತ್ತಿಟ್ಟ ಸವಾನ್​ ಬರ್ವಾಲ್​
Published on: 
  • ಭಾರತೀಯ ಮ್ಯಾರಥಾನ್‌ಗೆ ಹೊಸ ದಾಖಲೆ, ಇತಿಹಾಸ

  • ಸಾವನ್​ ಬರ್ವಾಲ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟು ಅಪರೂಪದ ಸಾಧನೆ

Asian Games: ಪ್ರಸಕ್ತ ಆತಿಥೇಯ ಜಪಾನ್​ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಬೇಟೆ ಬಲು ಜೋರಾಗಿದೆ. ಈ ಸಾಲಿಗೆ ಮ್ಯಾರಥಾನ್​ನಲ್ಲಿ ಸಾವನ್ ಬರ್ವಾಲ್ ಅವರ ಬೆಳ್ಳಿ ಕೂಡ ಸೇರ್ಪಡೆಯಾಗಿದ್ದು, 28 ವರ್ಷದ ಸೇನಾ ಅಥ್ಲೀಟ್ ಏಷ್ಯನ್ ಗೇಮ್ಸ್ ಮ್ಯಾರಥಾನ್‌ನಲ್ಲಿ ರಜತ ಗೆಲ್ಲುವ ಮೂಲಕ ಮತ್ತೊಮ್ಮೆ ತಮ್ಮ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.

ಪ್ರಸ್ತುತ ಭಾರತೀಯ ಭೂ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವ ಸಾವನ್ ಬರ್ವಾಲ್ 42.195 ಕಿ.ಮೀ ಓಟವನ್ನು 2 ಗಂಟೆ 11 ನಿಮಿಷ 37 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದಾರೆ. ಜಪಾನ್‌ನ ಇಚಿಟಕಾ ಯಮಾಶಿತಾ 2:10:49 ಸಮಯದೊಂದಿಗೆ ಚಿನ್ನದ ಪದಕ ಗೆದ್ದರೆ, ಚೀನಾದ ಪೆಯು ಫೆಂಗ್ 2:12:13 ಸಮಯ ರೆಕಾರ್ಡ್​ ಮಾಡಿ ಕಂಚಿಗೆ ಮುತ್ತಿಟ್ಟಿದ್ದಾರೆ.

44 ವರ್ಷಗಳ ಬಳಿಕ ಪದಕ

ಕಳೆದ 44 ವರ್ಷಗಳಿಂದ ಭಾರತಕ್ಕೆ ಮ್ಯಾರಥ್ಯಾನ್​ ವಿಭಾಗದಲ್ಲಿ ಪದಕ ಬಂದಿರಲಿಲ್ಲ. ಆದರೀಗ, ಸಾವನ್ ಬರ್ವಾಲ್ ಅವರ ಬೆಳ್ಳಿ ಪದಕದಿಂದ ವರ್ಷಗಳ ಕಾಯುವಿಕೆಗೆ ಕೊನೆಗೂ ಅಂತ್ಯ ಸಿಕ್ಕಿದೆ. ಈ ಮೊದಲು, ಹೊಸೂರಿನ ಕುಕ್ಕಪ್ಪ ಸೀತಾರಾಮನ್ ಅವರು 1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ ಇದು ಮ್ಯಾರಥಾನ್‌ನಲ್ಲಿ ಭಾರತಕ್ಕೆ ಒಲಿದ ಪದಕವಾಗಿದೆ. ಏಷ್ಯನ್ ಗೇಮ್ಸ್ ಮ್ಯಾರಥಾನ್‌ನಲ್ಲಿ ಪದಕ ಗೆದ್ದ ನಾಲ್ಕನೇ ಭಾರತೀಯ ಅಥ್ಲೀಟ್ ಆಗಿ ಬರ್ವಾಲ್ ಹೊರಹೊಮ್ಮಿದ್ದಾರೆ. ಇನ್ನು, 1951ರಲ್ಲಿ ನಡೆದ ಮೊದಲ ಏಷ್ಯನ್ ಕ್ರೀಡಾಕೂಟದಲ್ಲಿ ಛೋಟಾ ಸಿಂಗ್ ಅವರು ಚಿನ್ನ ಗೆದ್ದರೆ, ಸೂರತ್ ಸಿಂಗ್ ಮಾಥುರ್ ಎಂಬುವವರು ಕಂಚಿಗೆ ಮುತ್ತಿಟ್ಟರು.

ಮ್ಯಾರಥಾನ್‌ ಪ್ರವೇಶಿಸಿ ಒಂದು ವರ್ಷ

ಸಾವನ್ ಬರ್ವಾಲ್ ಇತ್ತೀಚೆಗೆ ಮ್ಯಾರಥಾನ್‌ನತ್ತ ಗಮನ ಹರಿಸಿದ್ದಾರೆ. ಇದಕ್ಕೂ ಮೊದಲು, ಅವರು 5,000 ಮೀಟರ್, 10,000 ಮೀಟರ್ ಮತ್ತು ಹಾಫ್ ಮ್ಯಾರಥಾನ್‌ನಂತಹ ದೂರದ ಸ್ಪರ್ಧೆಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ, ಬರ್ವಾಲ್ 48 ವರ್ಷಗಳ ಹಿಂದೆ ರೋಟರ್‌ಡ್ಯಾಮ್‌ನಲ್ಲಿ ನಡೆದ NN ಮ್ಯಾರಥಾನ್‌ನಲ್ಲಿ 2:11:58 ಸಮಯದೊಂದಿಗೆ ಶಿವನಾಥ್ ಸಿಂಗ್ ಸ್ಥಾಪಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಈಗ, ಅವರು ಏಷ್ಯನ್ ಕ್ರೀಡಾಕೂಟದಲ್ಲಿ 2:11:37 ಸಮಯದೊಂದಿಗೆ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.

ಬೆಳ್ಳಿ ಪದಕ ಗೆದ್ದ ಬಳಿಕ ಮಾತನಾಡಿದ ಬರ್ವಾಲ್, ರಾಷ್ಟ್ರೀಯ ದಾಖಲೆಯನ್ನು ಮುರಿಯುವುದು ನನ್ನ ಗುರಿ ಆಗಿರಲಿಲ್ಲ. ಬದಲಿಗೆ ಪದಕ ಗೆಲ್ಲುವುದು ಮುಖ್ಯ ಗುರಿಯಾಗಿತ್ತು. ಮ್ಯಾರಥಾನ್‌ನಲ್ಲಿ ಪದಕ ಗೆದ್ದಿರುವುದು ನನಗೆ ತುಂಬಾ ಸಂತೋಷ ತಂದಿದೆ ಮತ್ತು ಅದು ಕೂಡ ಬಹಳ ವರ್ಷಗಳ ನಂತರ ಎಂದು ಹೇಳಿದರು.

ಕ್ರೀಡಾ ಕೋಟಾದಡಿ ಸೇನೆಗೆ

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಜೋಗಿಂದರ್‌ನಗರದ ಸ್ಥಳೀಯರಾದ ಸಾವನ್ ಬರ್ವಾಲ್, ಚಿಕ್ಕ ವಯಸ್ಸಿನಲ್ಲಿಯೇ ಅಥ್ಲೆಟಿಕ್ಸ್‌ನಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಅವರ ಅಣ್ಣ ಶಾಲಾ ಟ್ರ್ಯಾಕ್ ತಂಡದಲ್ಲಿದ್ದರು. 14ನೇ ವಯಸ್ಸಿನಲ್ಲಿ, ತಮ್ಮ ಅಣ್ಣನೊಂದಿಗೆ ಟ್ರ್ಯಾಕ್‌ಗೆ ಹೋದ ಬರ್ವಾಲ್, 1500 ಮೀ ಓಟದಲ್ಲಿ ತರಬೇತಿ ಪಡೆದರು. 2015ರಲ್ಲಿ, ಅವರು 18 ವರ್ಷದೊಳಗಿನವರ ವಿಭಾಗದಲ್ಲಿ 3000 ಮೀಟರ್ ಓಟದೊಂದಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಇನ್ನು, 2021ರಲ್ಲಿ, ಅವರು ಫೆಡರೇಶನ್ ಕಪ್‌ನಲ್ಲಿ 5000 ಮೀಟರ್ ಓಟದೊಂದಿಗೆ ಹಿರಿಯ ಮಟ್ಟದ ಸ್ಪರ್ಧೆಗಳನ್ನು ಪ್ರವೇಶಿಸಿದರು. 2025ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 5,000 ಮೀಟರ್ ಮತ್ತು 10,000 ಮೀಟರ್ ಓಟದಲ್ಲಿ ಚಿನ್ನದ ಪದಕಗಳನ್ನು ಗೆದ್ದರು. 2019ರಲ್ಲಿ, ಅವರು ಕ್ರೀಡಾ ಕೋಟಾದಡಿ ತಮ್ಮ ಅಣ್ಣನ ಜತೆ ಭಾರತೀಯ ಸೇನೆಗೆ ಸೇರ್ಪಡೆಯಾದರು.

17ನೇ ಸ್ಥಾನಕ್ಕೆ ಮತ್ತೊಬ್ಬ ಭಾರತೀಯ ಕ್ರೀಡಾಪಟು

ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಮತ್ತೊಬ್ಬ ಭಾರತೀಯ ಕ್ರೀಡಾಪಟು ಕಾರ್ತಿಕ್ ಕರ್ಕೇರಾ ಎಂಬುವವರು 2 ಗಂಟೆ 22 ನಿಮಿಷ 41 ಸೆಕೆಂಡುಗಳಲ್ಲಿ ಓಟವನ್ನು ಮುಗಿಸಿ 17ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಸಾವನ್ ಬರ್ವಾಲ್ ಅವರ ಬೆಳ್ಳಿ ಪದಕವು ಭಾರತಕ್ಕೆ 44 ವರ್ಷಗಳಲ್ಲಿ ಏಷ್ಯನ್ ಗೇಮ್ಸ್ ಮ್ಯಾರಥಾನ್‌ನಲ್ಲಿ ಮೊದಲ ಪದಕವನ್ನು ತಂದುಕೊಟ್ಟಿದ್ದು, ಈ ಮೂಲಕ ಅವರು ತಮ್ಮದೇ ಹಳೆಯ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net