

ಐಚಿ-ನಗೋಯಾ: ಭಾರತದ ನಾವಿಕರು ಗುರುವಾರ ಮುಕ್ತಾಯಗೊಂಡ ಏಷ್ಯಾಡ್ (ASIAN GAMES) ರೋಯಿಂಗ್ (ಹುಟ್ಟುಗೋಲು ದೋಣಿ ಸ್ಪರ್ಧೆ) ಸ್ಪರ್ಧೆಯಲ್ಲಿ ಏಕೈಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಇದು ಏಷ್ಯಾಡ್ನಲ್ಲಿ ಕಳೆದ 24 ವರ್ಷಗಳಲ್ಲೇ ಭಾರತದ ಅತ್ಯಂತ ಕಳಪೆ ನಿರ್ವಹಣೆ ಎನಿಸಿದೆ. 2002ರಲ್ಲಿ ಭಾರತ ಕೊನೆಯದಾಗಿ ರೋಯಿಂಗ್ನಲ್ಲಿ ಏಕೈಕ ಪದಕಕ್ಕೆ ತೃಪ್ತಿಪಟ್ಟಿತ್ತು.
ಭಾರತೀಯ ನೇವಿಯ ಸತ್ನಾಮ್ ಸಿಂಗ್ ಮತ್ತು ಭಾರತೀಯ ಆರ್ಮಿಯ ಸಲ್ಮಾನ್ ಖಾನ್ ಜೋಡಿ ಡಬಲ್ ಸ್ಕಲ್ಸ್ ವಿಭಾಗದ ಫೈನಲ್ನಲ್ಲಿ 6 ನಿಮಿಷ, 13.25 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿತು. ಇದರೊಂದಿಗೆ ಭಾರತ ಬರಿಗೈಯಲ್ಲಿ ಮರಳುವುದನ್ನು ತಪ್ಪಿಸಿದರು.
26 ವರ್ಷದ ಸತ್ನಾಮ್ ಮಾಜಿ ರಾಷ್ಟ್ರೀಯ ಹ್ಯಾಂಡ್ಬಾಲ್ ಆಟಗಾರರಾಗಿದ್ದು, 8 ವರ್ಷಗಳ ಹಿಂದೆ ಒಲಿಂಪಿಯನ್ ಸ್ವರ್ಣ್ ಸಿಂಗ್ರಿಂದ ಸ್ಫೂರ್ತಿ ಪಡೆದು ರೋಯಿಂಗ್ ಪ್ರವೇಶಿಸಿದ್ದರು. ಪುರುಷರ ಸಿಂಗಲ್ಸ್ ಸ್ಕಲ್ಸ್ ಫೈನಲ್ನಲ್ಲಿ ಬಾಲರಾಜ್ ಪನ್ವರ್ 4ನೇ ಸ್ಥಾನಕ್ಕೆ ತೃಪ್ತಿಪಡುವುದರೊಂದಿಗೆ ಸ್ವಲ್ಪದರಲ್ಲೇ ಪದಕವಂಚಿತರಾದರು.
ಮಹಿಳೆಯರ ಫೋರ್ ವಿಭಾಗದ ಫೈನಲ್ನಲ್ಲಿ ಭಾರತ 6ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. 1982ರ ಏಷ್ಯಾಡ್ನಲ್ಲಿ ರೋಯಿಂಗ್ ಸ್ಪರ್ಧೆ ಸೇರ್ಪಡೆಗೊಂಡಿತ್ತು. ಭಾರತ 2010 ಮತ್ತು 2023ರ ಆವೃತ್ತಿಯಲ್ಲಿ ಗರಿಷ್ಠ 5 ಪದಕಗಳನ್ನು ಗೆದ್ದುಕೊಂಡಿತ್ತು.