ಸಾತ್ವಿಕ್​-ಚಿರಾಗ್​ಗೆ ಫ್ರೆಂಚ್​ ಓಪನ್ ಕಿರೀಟ; ವಿಶ್ವ ನಂ. 1 ಜೋಡಿಗೆ ವರ್ಷದ ಮೊದಲ ಪ್ರಶಸ್ತಿ ಸಂಭ್ರಮ

sat chi web
Published on

ಪ್ಯಾರಿಸ್​: ವಿಶ್ವ ನಂ. 1 ಸಾತ್ವಿಕ್​ ಸಾಯಿರಾಜ್​ ಮತ್ತು ಚಿರಾಗ್​ ಶೆಟ್ಟಿ ಜೋಡಿ ಫ್ರೆಂಚ್​ ಓಪನ್​ ಸೂಪರ್​-750 ಬ್ಯಾಡ್ಮಿಂಟನ್​ ಟೂರ್ನಿಯ ಪುರುಷರ ಡಬಲ್ಸ್​ ವಿಭಾಗದಲ್ಲಿ ಚಾಂಪಿಯನ್​ ಪಟ್ಟವೇರಿದೆ. ಈ ಮೂಲಕ ವರ್ಷದ 3ನೇ ಫೈನಲ್​ನಲ್ಲಿ ಮೊದಲ ಪ್ರಶಸ್ತಿ ಗೆಲುವಿನ ಸಂಭ್ರಮ ಕಂಡಿದೆ. ಹಿಂದಿನ 2 ಫೈನಲ್​ಗಳಲ್ಲಿ ರನ್ನರ್​ಅಪ್​ಗೆ ತೃಪ್ತಿಪಟ್ಟಿದ್ದರು.

ಸಾತ್ವಿಕ್​-ಚಿರಾಗ್​ ಜೋಡಿ ಭಾನುವಾರ ನಡೆದ ಫೈನಲ್​ನಲ್ಲಿ ತೈವಾನ್​ನ ಲೀ ಜೆ-ಹುಯಿ ಮತ್ತು ಯಾಂಗ್​ ಪೊ-ಸುವಾನ್​ ಜೋಡಿಯನ್ನು 21-11, 21-17 ನೇರಗೇಮ್​ಗಳಿಂದ ಗೆಲುವು ದಾಖಲಿಸಿತು. ಇದು ಅವರಿಗೆ 2ನೇ ಫ್ರೆಂಚ್​ ಓಪನ್​ ಪ್ರಶಸ್ತಿಯಾಗಿದೆ. ಈ ಮುನ್ನ 2022ರಲ್ಲಿ ಮೊದಲ ಬಾರಿ ಗೆದ್ದಿದ್ದರು.

ಸಾತ್ವಿಕ್​-ಚಿರಾಗ್​ ಜೋಡಿ ಈ ಮುನ್ನ ಉಪಾಂತ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್​ ದ. ಕೊರಿಯಾದ ಸೆಯೊ ಸೆಯುಂಗ್​ ಜೇಯಿ ಮತ್ತು ಕಾಂಗ್​ ಮಿನ್​ ಹ್ಯುಕ್​ ಜೋಡಿಯನ್ನು 21-13, 21-16 ನೇರಗೇಮ್​ಗಳಿಂದ ಮಣಿಸಿತ್ತು. ಸಾತ್ವಿಕ್​-ಚಿರಾಗ್​ ಈಗ ವಿಶ್ವ ಡಬಲ್ಸ್​ ರ್ಯಾಂಕಿಂಗ್​ನಲ್ಲಿ 1 ಲಕ್ಷ ರ್ಯಾಂಕಿಂಗ್​ ಅಂಕ ಕಲೆಹಾಕಿದ ಭಾರತದ ಮೊದಲ ಮತ್ತು ವಿಶ್ವದ 5ನೇ ಜೋಡಿ ಎನಿಸಿದ್ದಾರೆ.

ಲಕ್ಷ್ಯ ಸೇನ್​ಗೆ ನಿರಾಸೆ: ಸಿಂಗಲ್ಸ್​ನಲ್ಲಿ ಲಕ್ಷ್ಯ ಸೇನ್​ ಸೆಮೀಸ್​ನಲ್ಲಿ ಹಾಲಿ ವಿಶ್ವ ಚಾಂಪಿಯನ್​ ಥಾಯ್ಲೆಂಡ್​ನ ಕುನ್​ಲವುಟ್​ ವಿಟಿಸರ್ನ್​ ವಿರುದ್ಧ 22-20, 13-21, 11-21ರಿಂದ ಪರಾಭವಗೊಂಡರು. 1 ಗಂಟೆ 18 ನಿಮಿಷಗಳ ಕಾದಾಟದಲ್ಲಿ ಲಕ್ಷ್ಯ ಸೇನ್​ ಮೊದಲ ಗೇಮ್​ ಗೆದ್ದರೂ, ನಂತರದಲ್ಲಿ ಲಯ ತಪ್ಪಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net