

ನವದೆಹಲಿ: ರಿಷಭ್ ಪಂತ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಿಂದ ಯುವ ಬ್ಯಾಟರ್ ಸರ್ಫರಾಜ್ ಖಾನ್ರನ್ನು ಮತ್ತೊಮ್ಮೆ ಕೈಬಿಡಲಾಗಿದೆ. ಕಳೆದ ಹಲವು ಟೆಸ್ಟ್ ಸರಣಿಯಿಂದ ಖಾನ್ಗೆ ಅವಕಾಶ ಕೊಡದ ಬಿಸಿಸಿಐ ನಿರ್ಧಾರವನ್ನು ಟೀಕಿಸಿರುವ ಕ್ರಿಕೆಟ್ ಪ್ರಿಯರು, ಯುವ ಆಟಗಾರನನ್ನು ಏಕಿಷ್ಟು ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಇದೇ ಅ.30ರಿಂದ ಆರಂಭವಾಗಲಿರುವ ಈ ಪಂದ್ಯವು ಬೆಂಗಳೂರಿನಲ್ಲಿ ನಡೆಯಲಿದೆ. ತಂಡದಲ್ಲಿ ಸಾಯಿ ಸುದರ್ಶನ್, ಕೆ.ಎಲ್. ರಾಹುಲ್, ದೇವದತ್ತ ಪಡಿಕ್ಕಲ್, ಧ್ರುವ್ ಜ್ಯುರೆಲ್, ಮೊಹಮ್ಮದ್ ಸಿರಾಜ್ ಸೇರಿದಂತೆ ಮತ್ತಿತರರಿಗೆ ಬಿಸಿಸಿಐ ಸ್ಥಾನ ಕೊಟ್ಟಿದ್ದೇ ಆದರೂ ಸ್ಟಾರ್ ಬ್ಯಾಟರ್ ಸರ್ಫರಾಜ್ರನ್ನು ಕೈಬಿಟ್ಟಿದ್ದು ಏಕೆ? ಯಾವ ಕಾರಣಕ್ಕೆ? ಎಂದೆಲ್ಲ ನೆಟ್ಟಿಗರು ಪ್ರಶ್ನಿಸಿದ್ದಾರೆ. ಒಂದೆರೆಡು ಬಾರಿ ಹೊರಗಿಟ್ಟಿದ್ದರೆ ಓಕೆ. ಆದರೆ, ಪದೇ ಪದೇ ಒಬ್ಬ ಆಟಗಾರನಿಗೆ ಈ ರೀತಿ ಮಾಡುವುದು ಸರಿಯಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
ರೆಡ್ ಬಾಲ್ ಕ್ರಿಕೆಟ್ನಲ್ಲಿ ಅದ್ಭುತ ಇನ್ನಿಂಗ್ಸ್ ನೀಡಿರುವ ಸರ್ಫರಾಜ್ ಖಾನ್, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಎ ತಂಡದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಖಾನ್, ಬರೋಬ್ಬರಿ 92 ರನ್ ಬಾರಿಸಿದ್ದರು. ಕೆಲ ಸಮಯ ಫಿಟ್ನೆಸ್ ವಿಷಯವಾಗಿ ತಂಡದಿಂದ ಹೊರಗುಳಿದ ಸರ್ಫರಾಜ್, 10 ಕೆಜಿಗಿಂತ ಹೆಚ್ಚು ತೂಕ ಇಳಿಸಿಕೊಂಡು ತಂಡಕ್ಕೆ ಭರ್ಜರಿ ಕಮ್ಬ್ಯಾಕ್ ಮಾಡಿದರು. ರಣಜಿ ಟ್ರೋಫಿಯಲ್ಲಿ ಮುಂಬೈ ಪರ 74 ರನ್ ಸಿಡಿಸಿದ್ದಾರೆ. ಇಷ್ಟೆಲ್ಲ ಕೊಟ್ಟಿದ್ದರೂ ಸಹ ಸ್ಟಾರ್ ಬ್ಯಾಟರ್ನನ್ನು ಮತ್ತೊಮ್ಮೆ ಅವಕಾಶದಿಂದ ವಂಚಿತಗೊಳಿಸಿರುವುದು ಸದ್ಯ ಕ್ರಿಕೆಟ್ ಪ್ರೇಮಿಗಳ ಅಸಮಾದಾನಕ್ಕೆ ಕಾರಣವಾಗಿದೆ.