ಟಿ20 ಪಂದ್ಯದ ವೇಳೆಯೂ ಆಕಳಿಸಿ ಟ್ರೋಲ್​ಗೆ ಒಳಗಾದ ಪಾಕ್​ ಕ್ರಿಕೆಟಿಗ ಸರ್ಫ್ರಾಜ್​ ಅಹ್ಮದ್​!

yawn sarfraj
Published on

ಲಂಡನ್​: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಸರ್ಫ್ರಾಜ್​ ಅಹ್ಮದ್​ ಮತ್ತೊಮ್ಮೆ ಪಂದ್ಯದ ವೇಳೆ ಆಕಳಿಸುವ ಮೂಲಕ ಟ್ರೋಲ್​ಗೆ ಒಳಗಾಗಿದ್ದಾರೆ. 2019ರ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ವಿಕೆಟ್​ ಕೀಪಿಂಗ್ ಮಾಡುತ್ತಿದ್ದಾಗಲೇ ಆಕಳಿಸಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಸರ್ಫ್ರಾಜ್​ ಅಹ್ಮದ್, ಭಾನುವಾರ ಆತಿಥೇಯ ಇಂಗ್ಲೆಂಡ್​ ವಿರುದ್ಧ ಮ್ಯಾಂಚೆಸ್ಟರ್​ನಲ್ಲಿ ನಡೆದ 2ನೇ ಟಿ20 ಪಂದ್ಯದ ವೇಳೆ ಬೌಂಡರಿ ಗೆರೆ ಬಳಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದಾಗ ಆಕಳಿಸಿದ್ದರು. ಈ ಮೂಲಕ ಅವರು ವಿಶಿಷ್ಟ ದಾಖಲೆಯೊಂದನ್ನು ಕೂಡ ಬರೆದಿದ್ದಾರೆ ಎಂದು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

ಕಳೆದ ವರ್ಷ ಏಕದಿನ ವಿಶ್ವಕಪ್​ನಲ್ಲಿ ಭಾರತ ವಿರುದ್ಧದ ಪಂದ್ಯದ ವೇಳೆ ಸರ್ಫ್ರಾಜ್​ ಅಹ್ಮದ್ ಆಕಳಿಸಿದ್ದರು. ಇತ್ತೀಚೆಗೆ ಇಂಗ್ಲೆಂಡ್​ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯದ ವೇಳೆಯೂ ಅವರು ಮೈದಾನದ ಹೊರಗೆ ಕುಳಿತು ಆಕಳಿಸುತ್ತಿದ್ದ ಚಿತ್ರ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ಇಂಗ್ಲೆಂಡ್​ ವಿರುದ್ಧದ ಟಿ20 ಪಂದ್ಯದಲ್ಲಿ ಸಾಕಷ್ಟು ರನ್​ ಹರಿದು, ಪಂದ್ಯ ಕುತೂಹಲಕರವೆನಿಸಿದರೂ, ಸರ್ಫ್ರಾಜ್​ ಅಹ್ಮದ್ ಆಕಳಿಸಿರುವುದು ಪಾಕ್​ ಅಭಿಮಾನಿಗಳನ್ನು ಕೆರಳಿಸಿದೆ. ಇದರಿಂದ ಅವರು ಮೂರೂ ಕ್ರಿಕೆಟ್​ ಪ್ರಕಾರದ ಪಂದ್ಯಗಳ ವೇಳೆ ಆಕಳಿಸಿದ ಮೊದಲ ಕ್ರಿಕೆಟಿಗ ಎಂಬ ವಿಶಿಷ್ಟ ದಾಖಲೆ ಬರೆದರು ಎಂದೂ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.

ಸರ್ಫ್ರಾಜ್​ ಅಹ್ಮದ್ ಆಕಳಿಸುತ್ತಿರುವ ಚಿತ್ರದೊಂದಿಗೆ ಪಾಕ್​ ಕ್ರಿಕೆಟ್​ ಪ್ರೇಮಿಗಳು ಸಾಕಷ್ಟು ಕಾಲೆಳೆದಿದ್ದಾರೆ. 'ಪಾಕಿಸ್ತಾನ ಪಂದ್ಯಗಳನ್ನು ಗೆಲ್ಲುವುದು ಅಪರೂಪ ಇರಬಹುದು. ಆದರೆ ಸರ್ಫ್ರಾಜ್​ ಅಹ್ಮದ್ ಆಕಳಿಸುವುದು ನಿರಂತರ' ಎಂದು ಕೆಲವರು ಟ್ರೋಲ್​ ಮಾಡಿದ್ದಾರೆ. ಕರೊನಾ ವೈರಸ್​ ಗಾಳಿಯ ಮೂಲಕವೂ ಹರಡಬಹುದು. ಸರ್ಫ್ರಾಜ್​ ಅಹ್ಮದ್ ಎಚ್ಚರಿಕೆಯಿಂದ ಇರಿ ಎಂದು ಇನ್ನು ಕೆಲವರು ಕಾಲೆಳೆದಿದ್ದಾರೆ.

ಈ ಹಿಂದೆ ವಿಶ್ವಕಪ್​ ಪಂದ್ಯದ ವೇಳೆ ಆಕಳಿಸಿ ಟೀಕೆಗೆ ಒಳಗಾದಾಗ ಸರ್ಫ್ರಾಜ್​ ಅಹ್ಮದ್ ಅವರು, 'ಆಕಳಿಸುವುದು ಸಾಮಾನ್ಯ ವಿಷಯ. ಆಕಳಿಸಿದ ಕೂಡ ಪಾಪ ಮಾಡಿದಂತೆ ಅಲ್ಲ. ನನ್ನ ಆಕಳಿಕೆಯಿಂದ ಜನರು ಹಣ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ. ಅದು ಉತ್ತಮವೇ ಆಗಿದೆ' ಎಂದು ತಿರುಗೇಟು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net