ವಿಶ್ವ 10ಕೆ ಬೆಂಗಳೂರು ‘ಯಶಸ್ವಿ’ ಓಟ: ಉಗಾಂಡದ ಜೋಶುವಾ, ಸಾರಾ ಚಾಂಪಿಯನ್ಸ್

New Project
Published on

ಬೆಂಗಳೂರು: ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೋಡ್ ರೇಸ್ ಟಿಸಿಎಸ್ ವಿಶ್ವ 10ಕೆ ಬೆಂಗಳೂರು ಓಟ 17ನೇ ಆವೃತ್ತಿಗೆ ಭಾನುವಾರ ಉದ್ಯಾನನಗರಿಯಲ್ಲಿ ಅಭೂತ ಪೂರ್ವ ಬೆಂಬಲ ದೊರೆಯಿತು. ಭಾರತೀಯ ಸೇನೆ, ಕರ್ನಾಟಕ ಮತ್ತು ಕೇರಳ ಉಪಪ್ರದೇಶದ ಬೆಂಬಲದೊಂದಿಗೆ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಪರೇಡ್ ಮೈದಾನದ ಹೊರಗೆ ಓಟದ ಆರಂಭ ಮತ್ತು ಮುಕ್ತಾಯವನ್ನು ಕಂಡ ಕೂಟದಲ್ಲಿ ಉಗಾಂಡದ ಜೋಶುವಾ ಚೆಪ್ಟೆಗಿ, ಸಾರಾ ಚೆಲ್‌ನ್‌ಗಟ್ ಕ್ರಮವಾಗಿ ಎಲೀಟ್ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಭಾರತೀಯರ ಪುರುಷರ ವಿಭಾಗದಲ್ಲಿ ನೂತನ ಕೂಟ ದಾಖಲೆ ಬರೆದ ಅಭಿಷೇಕ್ ಪಾಲ್ ಅಗ್ರಸ್ಥಾನಿ ಎನಿಸಿದರೆ, ಮಹಿಳಾ ವಿಭಾಗದಲ್ಲಿ ಸಂಜೀವನಿ ಜಾಧವ್ ಸತತ 2ನೇ ಬಾರಿಗೆ ಗಾರ್ಡನ್ ಸಿಟಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಮುಂಜಾನೆ 5.30ಕ್ಕೆ ಆರಂಭಗೊಂಡ ಓಟದಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿ ಗಮನಸೆಳೆದರು.

ನಗರದ ಪ್ರಮುಖ ತಾಣಗಳಾದ ಕಬ್ಬನ್ ಪಾರ್ಕ್, ಚಿನ್ನಸ್ವಾಮಿ ಕ್ರೀಡಾಂಗಣ, ಹಲಸೂರು ಕೆರೆ ಮಾರ್ಗದಲ್ಲಿ ಸಾಗಿದ ರೇಸ್‌ನ ಮುಕ್ತ 10ಕೆ ವಿಭಾಗದಲ್ಲಿ ಓಟಗಾರರು ಸಂಭ್ರಮದಿಂದ ಪಾಲ್ಗೊಂಡರು. ಜತೆಗೆ ಮಜಾ ರನ್‌ನಲ್ಲಿ ಓಟಗಾರರು ವಿವಿಧ ವೇಷಭೂಷಣಗಳ ಜತೆಗೆ ಸಾಮಾಜಿಕ ಸಂದೇಶ ಸಾರುವ ಜನ ಜಾಗೃತಿಯ ಭಿತ್ತಿಪತ್ರಗಳೊಂದಿಗೆ ಗಮನಸೆಳೆದರು. ಕೂಟದ ಅಂತಾರಾಷ್ಟ್ರೀಯ ಪ್ರಚಾರ ರಾಯಭಾರಿ ಅಮೆರಿಕದ ಅವಳಿ ಒಲಿಂಪಿಕ್ಸ್ ಚಾಂಪಿಯನ್ ಓಟಗಾರ್ತಿ ದಲೀಲಾ ಮುಹಮ್ಮದ್, ಗೃಹ ಸಚಿವ ಜಿ.ಪರಮೇಶ್ವರ್ ಓಟಗಾರರನ್ನು ಹುರಿದುಂಬಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಡಿಸಿಎಂ ಡಿ.ಕೆ. ಶಿವಕುಮಾರ್, ಶಾಸಕ ಎನ್.ಎ. ಹ್ಯಾರಿಸ್ ವಿಜೇತರಿಗೆ ಪ್ರಶಸ್ತಿ ವಿತರಿಸುವ ಮೂಲಕ ಕೂಟಕ್ಕೆ ಮೆರುಗು ನೀಡಿದರು. ಕೂಟವು ಒಟ್ಟು 1.80 ಕೋಟಿ ರೂ. ಬಹುಮಾನ ಮೊತ್ತ ಹೊಂದಿತ್ತು.

ಎಲೀಟ್‌ನಲ್ಲಿ ಉಗಾಂಡ ಪ್ರಥಮ

ಕುತೂಹಲ ಮೂಡಿಸಿದ್ದ ಪುರುಷರ ಎಲೀಟ್ ವಿಭಾಗದಲ್ಲಿ ೇವರಿಟ್ ಆಗಿ ನಗರಕ್ಕೆ ಆಗಮಿಸಿದ್ದ ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್, ವಿಶ್ವದಾಖಲೆ ಓಟಗಾರ ಜೋಶುವಾ ಚೆಪ್ಟೆಗಿ ಎರಡು ಸೆಕೆಂಡ್‌ಗಳ ಅಂತರದಲ್ಲಿ ಮೊದಲ ಸ್ಥಾನಿ ಎನಿಸಿಕೊಂಡರು. ಜೋಶುವಾ ಸೇರಿ ಐವರು ಓಟಗಾರರು 22 ನಿಮಿಷ 35 ಸೆಕಂಡ್‌ಗಳಲ್ಲಿ ಒಟ್ಟಿಗೆ 8 ಕಿ.ಮೀ. ಗಡಿಯನ್ನು ದಾಟಿದರು. ಅಂತಿಮ ಹಂತದಲ್ಲಿ ವೇಗ ಹೆಚ್ಚಿಸಿಕೊಂಡ ಚೆಪ್ಟೆಗಿ, ಎರಿಟ್ರಿಯಾದ 17 ವರ್ಷದ ಸೈಮನ್ ಟೆಸ್ಫಾಗಿಯೋರ್ಗಿಸ್ ಅಮ್ಯಾನುಯೆಲ್ (27 ನಿಮಿಷ 55 ಸೆಕೆಂಡ್) ಹಿಂದಿಕ್ಕಿ ಅಗ್ರಸ್ಥಾನ ಪಡೆದರು.

ಕೀನ್ಯಾದ ವಿನ್ಸೆಂಟ್ ಲಂಗಟ್ (28 ನಿಮಿಷ 02 ಸೆಕೆಂಡ್) ಮೂರನೇ ಸ್ಥಾನಕ್ಕೆ ಸಮಾಧಾನ ಕಂಡರು. ಮಹಿಳಾ ವಿಭಾಗದಲ್ಲಿ 2024ರ ಒಲಿಂಪಿಕ್ಸ್ ೈನಲಿಸ್ಟ್ ಸಾರಾ ಚೆಲಗಂಟ್ 31 ನಿಮಿಷ 07 ಸೆಕೆಂಡ್‌ಗಳಲ್ಲಿ 10 ಸಾವಿರ ಕಿ.ಮೀ ಕ್ರಮಿಸಿ ಮೊದಲ ಸ್ಥಾನ ಪಡೆದರು. ಹಾಲಿ ವರ್ಷ ಸಾರಾ ಓಡಿದ ಮೊದಲ ಕೂಟ ಇದಾಗಿದೆ. ಎರಡು ಸೆಕೆಂಡ್‌ಗಳ ಅಂತರದಲ್ಲಿ ನಿರ್ಧರಿತವಾದ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿ ಕ್ರಮವಾಗಿ ಕೀನ್ಯಾದ ಸಿಂಟಿಯಾ ಚೆಪ್ಗೆನೊ (32 ನಿ,04ಸೆ), ಇಥಿಯೋಪಿಯಾದ ಗುಟೇನಿ ಶಾಂಕೋ (32 ನಿ, 06) ಸ್ಪರ್ಧೆ ಮುಗಿಸಿದರು.

ಪ್ರಶಸ್ತಿ ಉಳಿಸಿಕೊಂಡ ಸಂಜೀವನಿ

ಭಾರತೀಯ ಎಲೀಟ್ ಪುರುಷರ ವಿಭಾಗದಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದ ಅಭಿಷೇಕ್ ಪಾಲ್ 29 ನಿಮಿಷ 12 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ಚಾಂಪಿಯನ್ ಎನಿಸಿಕೊಂಡರು. ಮಹಿಳಾ ವಿಭಾಗದಲ್ಲಿ ಸಂಜೀವನಿ ಜಾಧವ್ 34 ನಿಮಿಷ 16 ಸೆಕೆಂಡ್‌ಗಳಲ್ಲಿ ಅಂತಿಮ ಗೆರೆ ದಾಟಿ ಸತತ 2ನೇ ವರ್ಷವೂ ಅಗ್ರಸ್ಥಾನ ಪಡೆಯುವ ಮೂಲಕ ಚಾಂಪಿಯನ್ ಪಟ್ಟ ಉಳಿಸಿಕೊಂಡರು.

ಅಭಿಷೇಕ್ ಪಾಲ್ 29 ನಿಮಿಷ 12 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರೆ, ಸಾವನ್ ಬರ್ವಲ್ (29 ನಿಮಿಷ 45 ಸೆಕಂಡ್) ಎರಡನೇ ಸ್ಥಾನ ಪಡೆದರು. ಕಳೆದ ಬಾರಿಯ ಅಗಸ್ಥಾನಿ ಕಿರಣ್ ಮಾತ್ರೆ (30 ನಿ,01 ಸೆ) ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಭಾರತಿ ನೈನ್ (35ನಿ, 36ಸೆ) ಹಾಗೂ ಪೂನಮ್ ಸೋನುನೆ (35ನಿ, 57ಸೆ) ಮಹಿಳಾ ವಿಭಾಗದಲ್ಲಿ ಕ್ರಮವಾಗಿ 2, 3ನೇ ಸ್ಥಾನ ದಕ್ಕಿಸಿಕೊಂಡರು. ಭಾರತೀಯ ವಿಭಾಗದ ವಿಜೇತರು ₹3 ಲಕ್ಷ ಬಹುಮಾನ ಪಡೆದರೆ, ಕೂಟದಾಖಲೆ ರಚಿಸಿದ ಅಭಿಷೇಕ್ ₹1 ಲಕ್ಷ ಬೋನಸ್ ಮೊತ್ತವನ್ನು ಜೇಬಿಗಿಳಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net