ಡಕಾರ್ ರ‌್ಯಾಲಿಯಲ್ಲಿ ಸಂತೋಷ್‌ಗೆ ಗಂಭೀರ ಗಾಯ

cs santosh web
Published on

ನವದೆಹಲಿ: ಭಾರತದ ಹೆಸರಾಂತ ಬೈಕ್ ರೇಸರ್ ಹಾಗೂ ಕನ್ನಡಿಗ ಸಿಎಸ್ ಸಂತೋಷ್ , ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಡಕಾರ್ ರ‌್ಯಾಲಿ ವೇಳೆ ಅಪಘಾತಕ್ಕೀಡಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ಕೋಮಾದಲ್ಲಿ ಇಡಲಾಗಿದೆ. ಏರ್‌ಲ್‌ಟಿ ಮೂಲಕ ಸಂತೋಷ್ ಅವರನ್ನು ರಿಯಾದ್‌ನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
37 ವರ್ಷದ ಸಂತೋಷ್ ವಿಶ್ವದ ಅತಿದೊಡ್ಡ ರ‌್ಯಾಲಿಯಲ್ಲಿ ಹೀರೋ ಮೋಟೋಸ್ಪೋರ್ಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಬುಧವಾರ ಅಪಘಾತ ಸಂಭವಿಸಿದ್ದು, ಮುಂದಿನ 24 ಗಂಟೆಗಳ ಕಾಲ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ.
‘ಡಕಾರ್ 2021ರ ರ‌್ಯಾಲಿಯ 4ನೇ ಹಂತದ ವೇಳೆ ಸಂತೋಷ್ ಓಡಿಸುತ್ತಿದ್ದ ಬೈಕ್ ಅಕಸ್ಮಾತ್ ಆಗಿ ಅಪಘಾತಕ್ಕೀಡಾಯಿತು. ಬಳಿಕ ರಿಯಾದ್ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಸಂತೋಷ್ ಬೇಗ ಸುಧಾರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ’ ಎಂದು ಹೀರೋ ಮೋಟೋಸ್ಪೋರ್ಟ್ಸ್ ಟ್ವೀಟ್ ಮಾಡಿದೆ.

ಸಂತೋಷ್ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಆಸ್ಪತ್ರೆಗೆ ಸಾಗಿಸುವ ಮಧ್ಯೆ ಅವರಿಗೆ ಪ್ರಜ್ಞೆಯಿತ್ತು ಎಂದು ಹೇಳಲಾಗಿದೆ. ಕಳೆದ ವರ್ಷದ ಡಕಾರ್-2020ರ ವೇಳೆ ಅಪಘಾತ ಸಂಭವಿಸಿದ ಸ್ಥಳದಲ್ಲೇ ಈ ಬಾರಿಯೂ ಅಂಥ ಅವಘಡ ನಡೆದಿದೆ. ಕಳೆದ ವರ್ಷದ ಅವಘಡದಲ್ಲಿ ಪೌಲೊ ಗೊನ್ಕಾಲ್ವೇಸ್ ಮೃತಪಟ್ಟಿದ್ದರು. ಪೌಲೊ ಮೃತಪಟ್ಟ ಬಳಿಕ ಹೀರೋ ಮೋಟೋಸ್ಪೋರ್ಟ್ ರೇಸ್‌ನಿಂದ ಹಿಂದೆ ಸರಿದಿತ್ತು. ಜಲ್ಲಿ ಟ್ರ್ಯಾಕ್‌ನಲ್ಲಿ 135 ಕಿಲೋಮೀಟರ್‌ಗೂ ಮುನ್ನ ಸಂತೋಷ್ ಬೈಕ್ ನಿಯಂತ್ರಣ ತಪ್ಪಿದೆ. ಡಕಾರ್ ರ‌್ಯಾಲಿ ರೇಸ್‌ನಲ್ಲಿ ಸಂತೋಷ್ 7ನೇ ಬಾರಿ ಸ್ಪರ್ಧಿಸುತ್ತಿದ್ದು, ವಿಶ್ವದ ಅತ್ಯಂತ ಕಠಿಣ ಹಾಗೂ ಅಪಾಯಕಾರಿ ಮೋಟಾರ್ ಸ್ಪೋರ್ಟ್ ರೇಸ್ ಇದಾಗಿದೆ.

2015ರಲ್ಲಿ ಡಕಾರ್ ರೇಸ್ ಮುಕ್ತಾಯಗೊಳಿಸುವ ಮೂಲಕ ಸಿಎಸ್ ಸಂತೋಷ್ ಈ ಸಾಧನೆ ಮಾಡಿದ ಭಾರತದ ಮೊಟ್ಟ ಮೊದಲ ಸವಾರ ಎನಿಸಿಕೊಂಡಿದ್ದರು. ಬಳಿಕ ಸತತ 2 ವರ್ಷ ರೇಸ್ ಮುಕ್ತಾಯಗೊಳಿಸಿದ್ದರು. 2013ರ ಅಬುಧಾಬಿ ಡೆಸರ್ಟ್ ರೇಸ್‌ನಲ್ಲೂ ಸಂತೋಷ್ ಸಮಸ್ಯೆಗೆ ಸಿಲುಕಿದ್ದರು. ಸಂತೋಷ್ ಚಲಿಸುತ್ತಿದ್ದ ಸುಜಿಕಿ ಎಂಎಕ್ಸ್450ಎಕ್ಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಕುತ್ತಿಗೆ ಭಾಗಕ್ಕೆ ಸುಟ್ಟ ಗಾಯಗಳಾಗಿದ್ದವು. 2021ರ ಡಕಾರ್ ರ‌್ಯಾಲಿ ಜನವರಿ 2ರಂದು ಆರಂಭಗೊಂಡಿದ್ದು, 16ರವರೆಗೆ 12 ಹಂತಗಳಲ್ಲಿ 7,646 ಕಿಲೋಮೀಟರ್ ಸಾಗಲಿದೆ. ನಾಲ್ಕನೇ ಹಂತ ರೇಸ್ ಅತ್ಯಂತ ಉದ್ದವಾಗಿದ್ದು, 813 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net