

ಭುವನೇಶ್ವರ: ಹಾಲಿ ಚಾಂಪಿಯನ್ ಭಾರತ ತಂಡ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಘಾತಕಾರಿ ಆರಂಭ ಕಂಡಿದೆ. ಆತಿಥೇಯ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 4-5 ಗೋಲುಗಳಿಂದ ಸೋಲು ಅನುಭವಿಸಿದೆ. ಸಂಜಯ್ (15, 57, 58ನೇ ನಿಮಿಷ) ಸಿಡಿಸಿದ ಹ್ಯಾಟ್ರಿಕ್ ಗೋಲಿನ ಸಾಹಸದ ನಡುವೆಯೂ ಭಾರತಕ್ಕೆ ನಿರಾಸೆ ಎದುರಾಯಿತು.
ಕಳಿಂಗಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡದ ರಕ್ಷಣಾ ವಿಭಾಗ ನಿರಾಶಾದಾಯಕ ನಿರ್ವಹಣೆ ತೋರಿತು. ಇದರಿಂದಾಗಿ ಭಾರತ ಮೊದಲ 7 ನಿಮಿಷಗಳಲ್ಲೇ 2 ಗೋಲು ಬಿಟ್ಟುಕೊಟ್ಟಿತು. ಮುಂದಿನ 8 ನಿಮಿಷಗಳಲ್ಲಿ 2 ಗೋಲು ಸಿಡಿಸಿ ತಿರುಗೇಟು ನೀಡುವ ಮೂಲಕ ಭಾರತ ತಂಡ ಮೊದಲ ಕ್ವಾರ್ಟರ್‌ನಲ್ಲಿ 2-2 ಸಮಬಲ ಸಾಧಿಸಿತು. ಆದರೆ 2ನೇ ಕ್ವಾರ್ಟರ್‌ನಲ್ಲಿ ಮತ್ತೊಂದು ಗೋಲು ಸಿಡಿಸಿದ ಫ್ರಾನ್ಸ್ 3-2 ಮುನ್ನಡೆ ಸಾಧಿಸಿತು. ಬಳಿಕ ಮುನ್ನಡೆಯನ್ನು 5-2ಕ್ಕೇರಿಸಿತು. ಪಂದ್ಯ ಮುಕ್ತಾಯಕ್ಕೆ 3 ನಿಮಿಷಗಳಿದ್ದಾಗ ಭಾರತ 2 ನಿಮಿಷಗಳಲ್ಲಿ 2 ಗೋಲು ಬಾರಿಸಿ ತಿರುಗೇಟು ನೀಡಲು ಯತ್ನಿಸಿತು. ಆದರೆ ಆಗ ಸಾಕಷ್ಟು ತಡವಾಗಿದ್ದ ಕಾರಣ, ಡ್ರಾ ಸಾಧಿಸುವ ಅವಕಾಶವೂ ಸಿಗಲಿಲ್ಲ.
ಫ್ರಾನ್ಸ್ ಪರ ನಾಯಕ ಕ್ಲೆಮೆಂಟ್ ಟಿಮೊಥೀ (1, 23, 32ನೇ ನಿಮಿಷ) ಹ್ಯಾಟ್ರಿಕ್ ಗೋಲು ಬಾರಿಸಿದರು. ಮಾರ್ಕೀ ಬೆಂಜಮಿನ್ (7) ಮತ್ತು ಸೆಲ್ಲಿಯರ್ ಕೊರೆಂಟಿನ್ (48) ತಲಾ 1 ಗೋಲು ಗಳಿಸಿದರು. ಭಾರತ ಪರ ಉತ್ತಮ್ ಸಿಂಗ್ (10) ಗೋಲಿನ ಖಾತೆ ತೆರೆದಿದ್ದರು.
ಭಾರತಕ್ಕೆ ಗುರುವಾರದ ಪಂದ್ಯ:
ಎದುರಾಳಿ: ಕೆನಡ
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್