ಜೂ. ಹಾಕಿ ವಿಶ್ವಕಪ್‌ನಲ್ಲಿ ಗೋಲುಗಳ ಮಳೆ ಹರಿಸಿ ಪುಟಿದೆದ್ದ ಆತಿಥೇಯ ಭಾರತ

hockey web
Published on

ಭುವನೇಶ್ವರ: ಮೊದಲ ಪಂದ್ಯದಲ್ಲಿ ಫ್ರಾನ್ಸ್ ಎದುರು ಆಘಾತ ಎದುರಿಸಿದ್ದ ಹಾಲಿ ಚಾಂಪಿಯನ್ ಭಾರತ ತಂಡ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಗೋಲಿನ ಮಳೆಹರಿಸಿ ಪುಟಿದೆದ್ದಿದೆ. ಆತಿಥೇಯ ಭಾರತ ತಂಡ ತನ್ನ 2ನೇ ಪಂದ್ಯದಲ್ಲಿ ಕೆನಡ ವಿರುದ್ಧ 13-1 ಗೋಲುಗಳಿಂದ ಭರ್ಜರಿ ಗೆಲುವು ದಾಖಲಿಸಿ ನಾಕೌಟ್ ಹಂತಕ್ಕೇರುವ ಮತ್ತು ಪ್ರಶಸ್ತಿ ಉಳಿಸಿಕೊಳ್ಳುವ ಆಸೆ ಜೀವಂತವಿಟ್ಟಿದೆ.

ಕಳಿಂಗಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತ ಆರಂಭದಿಂದಲೇ ಕೆನಡ ಮೇಲೆ ಆಕ್ರಮಣ ನಡೆಸಿ 27 ನಿಮಿಷದೊಳಗೆ 4 ಗೋಲು ಬಾರಿಸಿತು. ಬಳಿಕ ಮೊದಲಾರ್ಧದ ಅಂತ್ಯಕ್ಕೆ ಕೆನಡ ಹಿನ್ನಡೆಯನ್ನು 1-4ಕ್ಕೆ ಇಳಿಸಿಕೊಂಡಿತು. ದ್ವಿತೀಯಾರ್ಧದಲ್ಲಿ ಭಾರತ 9 ಗೋಲು ಸಿಡಿಸಿ ಪ್ರಾಬಲ್ಯ ಮೆರೆಯಿತು.

ಭಾರತ ಪರ ಸಂಜಯ್ (17, 32, 59ನೇ ನಿಮಿಷ), ಅರೈಜೀತ್ ಸಿಂಗ್ ಹುಂಡಲ್ (40, 50, 51ನೇ ನಿಮಿಷ) ಹ್ಯಾಟ್ರಿಕ್ ಗೋಲು ಸಿಡಿಸಿದರೆ, ಉತ್ತಮ್ ಸಿಂಗ್ (6, 47ನೇ ನಿಮಿಷ), ಶಾರ್ದಾನಂದ್ ತಿವಾರಿ (35, 53) ತಲಾ 2 ಗೋಲು ಗಳಿಸಿದರು. ನಾಯಕ ವಿವೇಕ್ ಸಾಗರ್ ಪ್ರಸಾದ್ (8), ಮಣಿಂದರ್ ಸಿಂಗ್ (13), ಅಭಿಷೇಕ್ ಲಾಕ್ರಾ (55) ತಲಾ 1 ಗೋಲು ಬಾರಿಸಿದರು.

ಪೋಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲೂ ಗೆದ್ದರೆ ಅಥವಾ ಡ್ರಾ ಸಾಧಿಸಿದರೆ ಗೋಲು ಲೆಕ್ಕಾಚಾರದಲ್ಲಿ ಕ್ವಾರ್ಟರ್​ಫೈನಲ್‌ಗೇರುವ ಅವಕಾಶವನ್ನು ಭಾರತ ತಂಡ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net