

ಬೆಂಗಳೂರು: ಬ್ಯಾಟಿಂಗ್ ಸಲಹೆಗಾರರಾಗಿದ್ದ ಸಂಜಯ್ ಬಂಗಾರ್, ಐಪಿಎಲ್ ಫ್ರಾಂಚೈಸಿ ಆರ್‌ಸಿಬಿ ತಂಡದ ಹೊಸ ಮುಖ್ಯ ಕೋಚ್ ಆಗಿ ಮುಂದಿನ ಎರಡು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಬಂಗಾರ್ ಅವರನ್ನು ಬ್ಯಾಟಿಂಗ್ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗಿತ್ತು. ವೈಯಕ್ತಿಕ ಕಾರಣಗಳಿಂದ ಸೈಮನ್ ಕಾಟಿಚ್ ಯುಎಇಯಲ್ಲಿ ನಡೆದ 14ನೇ ಐಪಿಎಲ್‌ನ 2ನೇ ಚರಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಮೈಕ್ ಹೆಸ್ಸನ್ ಹಂಗಾಮಿ ಕೋಚ್ ಆಗಿದ್ದರು. ಇದೀಗ ಮೈಕ್ ಹೆಸ್ಸನ್ ತಂಡದ ನಿರ್ದೇಶಕನ ಸ್ಥಾನದಲ್ಲಷ್ಟೇ ಮುಂದುವರಿಯಲಿದ್ದಾರೆ.
49 ವರ್ಷದ ಸಂಜಯ್ ಬಂಗಾರ್ ಬ್ಯಾಟಿಂಗ್ ಕೋಚ್ ಆಗಿ ಉತ್ತಮ ಹೆಸರು ಮಾಡಿದ್ದಾರೆ. ಅವರ ಅನುಭವವನ್ನು ತಂಡ ಬಳಸಿಕೊಳ್ಳಲಿದೆ. ಆಟಗಾರರೊಂದಿಗೆ ಸಹಾಯಕ ಸಿಬ್ಬಂದಿ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಆರ್‌ಸಿಬಿ ಟ್ವೀಟ್ ಮಾಡಿದೆ. ಬಂಗಾರ್ 2014ರಿಂದ 2019ರ ಏಕದಿನ ವಿಶ್ವಕಪ್‌ವರೆಗೂ ರಾಷ್ಟ್ರೀಯ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದರು. ಬಂಗಾರ್ ಭಾರತ ಪರ 2001ರಿಂದ 2004ರ ನಡುವೆ 12 ಟೆಸ್ಟ್, 15 ಏಕದಿನ ಪಂದ್ಯಗಳನ್ನಾಡಿದ್ದರು.