ಯುಎಸ್​ ಓಪನ್​ ಆಡಲ್ಲ ಸಾನಿಯಾ, ಕಾದುನೋಡಲಿದ್ದಾರೆ ಬೋಪಣ್ಣ

us open
Published on

ನವದೆಹಲಿ: ವೃತ್ತಿಪರ ಟೆನಿಸ್​ ಚಟುವಟಿಕೆ ಪುನರಾರಂಭಕ್ಕೆ ವೇದಿಕೆ ಸಜ್ಜಾಗಿದೆ. ಈ ಮಾಸಾಂತ್ಯದಲ್ಲಿ ಯುಎಸ್​ ಓಪನ್​ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿ ಕೂಡ ನಡೆಯಲಿದೆ. ಆದರೆ ಭಾರತದಲ್ಲಿನ ಕರೊನಾ ಹಾವಳಿಯಿಂದಾಗಿ ಅಭ್ಯಾಸದ ಕೊರತೆ ಮತ್ತು ಪ್ರಯಾಣ ನಿರ್ಬಂಧಗಳಿಂದಾಗಿ ಸಾನಿಯಾ ಮಿರ್ಜಾ ಯುಎಸ್​ ಓಪನ್​ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಕನ್ನಡಿಗ ರೋಹನ್​ ಬೋಪಣ್ಣ ಟೂರ್ನಿಯಲ್ಲಿ ಆಡುವ ಬಗ್ಗೆ ಸದ್ಯಕ್ಕೆ ಕಾದುನೋಡಲು ನಿರ್ಧರಿಸಿದ್ದಾರೆ.

33 ವರ್ಷದ ಸಾನಿಯಾ ಮಿರ್ಜಾ ಫ್ಲಷಿಂಗ್​ ಮೆಡೋಸ್​ನ ಮಹಿಳಾ ಡಬಲ್ಸ್ ವಿಭಾಗದಲ್ಲಿ ನೇರವಾಗಿ ಕಣಕ್ಕಿಳಿಯಲು ಅರ್ಹರಿದ್ದಾರೆ. ಸದ್ಯ ಅವರ ವಿಶ್ವ ರ್ಯಾಂಕಿಂಗ್​ 226ಕ್ಕೆ ಕುಸಿದಿದ್ದರೂ, 2017ರಲ್ಲಿ ಅವರು ಗಾಯಗೊಂಡು ಕಣದಿಂದ ನಿರ್ಗಮಿಸಿದಾಗ ಇದ್ದ ವಿಶ್ವ ನಂ. 9 ಪಟ್ಟದ ಅವರಿಗೆ ವಿಶೇಷ ರ್ಯಾಂಕಿಂಗ್​ ಸ್ಥಾನವಿದೆ. ಬಳಿಕ ತಾಯ್ತನದ ಬಿಡುವನ್ನೂ ಪಡೆದುಕೊಂಡಿದ್ದರ ಅವರು 2020ರ ಆರಂಭದಲ್ಲಿ ಮರಳಿ ಕಣಕ್ಕಿಳಿದಿದ್ದರು. ಹೋಬರ್ಟ್​ ಓಪನ್​ ಜಯಿಸುವ ಮೂಲಕ ಯಶಸ್ವಿ ಪುನರಾಗಮನವನ್ನೂ ಕಂಡಿದ್ದರು. ಆದರೆ ಹಾಲಿ ಪರಿಸ್ಥಿತಿಯಲ್ಲಿ ಅವರು ಪುತ್ರನ ಜತೆಗೆ ಅಥವಾ ಪುತ್ರನನ್ನು ತವರಿನಲ್ಲಿ ಬಿಟ್ಟು ನ್ಯೂಯಾರ್ಕ್​ಗೆ ಪ್ರಯಾಣಿಸಲು ಸಿದ್ಧರಿಲ್ಲ.

ಮತ್ತೊಂದೆಡೆ, ಡಬಲ್ಸ್​ ಆಟಗಾರ ರೋಹನ್​ ಬೋಪಣ್ಣ ಅವಕಾಶವನ್ನು ಇನ್ನೂ ಮುಕ್ತವಾಗಿಟ್ಟಿದ್ದಾರೆ. ಆಗಸ್ಟ್​ 3ರ ಒಳಗಾಗಿ ನಿರ್ಧಾರವನ್ನು ತಿಳಿಸುವಂತೆ ಯುಎಸ್​ ಓಪನ್​ ಸಂಘಟಕರು ಸೂಚಿಸಿದ್ದಾರೆ. ಆ ಬಳಿಕ ವಿಮಾನ ಬುಕ್​ ಮಾಡಬಹುದೇ ಮತ್ತು ನಾನು ಯುಎಸ್​ಗೆ ಪ್ರಯಾಣಿಸಬಹುದೇ ಎಂಬುದನ್ನು ಪರಿಶೀಲಿಸುವೆ ಎಂದು ಬೋಪಣ್ಣ ಹೇಳಿದ್ದಾರೆ.

ಯುಎಸ್​ ಓಪನ್​ನಲ್ಲಿ ಈ ಬಾರಿ 32 ಜೋಡಿಗಳಿಗೆ ಕಣಕ್ಕಿಳಿಯಲು ಅವಕಾಶ ನೀಡಲಾಗಿದೆ. ಅದರಲ್ಲೂ ಸಿಂಗಲ್ಸ್ ಆಟಗಾರರು ಡಬಲ್ಸ್​ನಲ್ಲಿ ಆಡುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ. ಹಾಲಿ ವಿಶ್ವ ನಂ. 37 ಆಟಗಾರರಾಗಿರುವ ಬೋಪಣ್ಣ ಹೊಸ ಜತೆಗಾರರ ಜತೆಗೆ ಟೂರ್ನಿಯಲ್ಲಿ ಕಣಕ್ಕಿಳಿಯಬೇಕಾಗಿದೆ. ಅವರ ಹಿಂದಿನ ಜತೆಗಾರ ಕೆನಡದ ಡೆನಿಸ್​ ಶಪವಲೋವ್​ ಕೇವಲ ಸಿಂಗಲ್ಸ್​ನಲ್ಲಿ ಮಾತ್ರ ಆಡಲು ಆದ್ಯತೆ ನೀಡಲಿರುವುದು ಇದಕ್ಕೆ ಕಾರಣ. ಟೂರ್ನಿಯ ಮಿಶ್ರ ಡಬಲ್ಸ್​ ವಿಭಾಗದ ಸ್ಪರ್ಧೆಯನ್ನು ಕೈಬಿಡಲಾಗಿದೆ. ಯುಎಸ್​ ಓಪನ್​ ಆಗಸ್ಟ್​ 31ರಂದು ಆರಂಭಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net