

ಬೆಂಗಳೂರು: ಆಗಸ್ಟ್ 15ರಿಂದ ಸೆಪ್ಟೆಂಬರ್ 1ರವರೆಗೆ ನಿಗದಿಯಾಗಿರುವ 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಪೂರ್ವಭಾವಿಯಾಗಿ ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ಅನುಭವಿ ಆಟಗಾರರ ಜತೆಗೆ ಆಲ್ರೌಂಡರ್‌ಗಳ ಖರೀದಿಗೆ ಆರು ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. 24 ವರ್ಷದ ಆರಂಭಿಕ ಎಲ್.ಆರ್. ಚೇತನ್ ಲಿಲಾವಿನ ದುಬಾರಿ ಆಟಗಾರ ಎನಿಸಿದರೆ, ಟೀಮ್ ಇಂಡಿಯಾ ವೇಗಿ ಪ್ರಸಿದ್ಧಕೃಷ್ಣ ಖರೀದಿಗೆ ್ರಾಂಚೈಸಿಗಳು ಆರಂಭದಲ್ಲಿ ನಿರಾಸಕ್ತಿ ತೋರಿದವು. ಆದರೆ ಅಂತಿಮ ಸುತ್ತಿನಲ್ಲಿ ಮೈಸೂರ್ ವಾರಿಯರ್ಸ್ ತಂಡ ₹1 ಲಕ್ಷಕ್ಕೆ ಪ್ರಸಿದ್ಧ ಅವರನ್ನು ಖರೀದಿಸಿತು.
ಕಳೆದ ಆವೃತ್ತಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದ ಎಲ್‌ಆರ್ ಚೇತನ್ ಮೂಲಬೆಲೆಗಿಂತ ಎಂಟುಪಟ್ಟು ಹೆಚ್ಚಿನ ಮೊತ್ತಕ್ಕೆ ಸೇಲಾದರು. ಬಿ ಕೆಟಗರಿಯಲ್ಲಿ ಮೂಲಬೆಲೆ ₹1 ಲಕ್ಷ ಹೊಂದಿದ್ದ ಚೇತನ್‌ಗೆ ಬೆಂಗಳೂರು ಬ್ಲಾಸ್ಟರ್ಸ್ ತಂಡ ₹8.60 ಲಕ್ಷ ವ್ಯಯಿಸಿತು. ಚೇತನ್ ಗುಲ್ಬರ್ಗಾ ಪರ ಆಡಿದ 11 ಇನಿಂಗ್ಸ್‌ಗಳಲ್ಲಿ 309 ರನ್ ಸಿಡಿಸಿ, ಟೂರ್ನಿಯ 6ನೇ ಗರಿಷ್ಠ ರನ್ ಸ್ಕೋರರ್ ಆಗಿದ್ದರು. ನಿರೂಪಕ ಚಾರು ಶರ್ಮ ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು.
ಎ ಕೆಟಗರಿಯಲ್ಲಿ ಸ್ಥಾನ ಪಡೆದಿದ್ದ ಅನುಭವಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ 2ನೇ ದುಬಾರಿ ಆಟಗಾರ ಎನಿಸಿದರು. ಶಿವಮೊಗ್ಗ ಲಯನ್ಸ್ ಕೈಬಿಟ್ಟಿದ ಶ್ರೇಯಸ್ ಗೋಪಲ್ ₹7.60 ಲಕ್ಷಕ್ಕೆ ಮಂಗಳೂರು ಡ್ರಾೃಗನ್ಸ್ ತಂಡದ ಪಾಲಾದರೆ, ಐಪಿಎಲ್ ಆಡಿರುವ ಅನುಭವ ಹೊಂದಿರುವ ಆಲ್ರೌಂಡರ್ ಕೆ. ಗೌತಮ್ ₹7.40 ಲಕ್ಷಕ್ಕೆ ಹಾಲಿ ರನ್ನರ್ ಅಪ್ ಮೈಸೂರು ವಾರಿಯರ್ಸ್ ತಂಡ ಸೇರಿದರು. ವಿಕೆಟ್ ಕೀಪರ್-ಬ್ಯಾಟರ್ ಲವನೀತ್ ಸಿಸೋಡಿಯಾ 7.20 ಲಕ್ಷ ರೂ.ಗೆ ಗುಲ್ಬರ್ಗಾ ಮಿಸ್ಟಿಕ್ಸ್ ಪಾಲಾದರೆ, ಅನುಭವಿ ಮೊಹಮದ್ ತಾಹ ₹6.60 ಲಕ್ಷಕ್ಕೆ ಹುಬ್ಬಳ್ಳಿ ಟೈಗರ್ಸ್, ಪ್ರವೀಣ್ ದುಬೆ ₹6.80 ಲಕ್ಷಕ್ಕೆ ಗುಲ್ಬರ್ಗಾ ಮಿಸ್ಟಿಕ್ಸ್, ಕೆಸಿ ಕಾರಿಯಪ್ಪ ₹4.20 ಲಕ್ಷಕ್ಕೆ ಹುಬ್ಬಳ್ಳಿ ಟೈಗರ್ಸ್ ತಂಡ ಸೇರಿದರು.
ಯುವ ವೇಗಿ ವಿಧ್ಯಾಧರ್ ಪಾಟೀಲ್ ಹಾಗೂ ಆಲ್ರೌಂಡರ್ ಹಾರ್ದಿಕ್ ರಾಜ್ ಕ್ರಮವಾಗಿ ₹6.40 ಲಕ್ಷಕ್ಕೆ ಮೈಸೂರು ವಾರಿಯರ್ಸ್ ಮತ್ತು ₹5.80 ಲಕ್ಷಕ್ಕೆ ಶಿವಮೊಗ್ಗ ಲಯನ್ಸ್ ತಂಡಗಳಿಗೆ ಸೇರಿದರು.
ಮೈಸೂರು ಪಾಲಾದ ದ್ರಾವಿಡ್ ಪುತ್ರ
ಟೀಮ್ ಇಂಡಿಯಾ ಮಾಜಿ ಕೋಚ್, ದಿಗ್ಗಜ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್‌ರನ್ನು ಮೂಲಬೆಲೆ ₹50 ಸಾವಿರ ನೀಡಿ ಮೈಸೂರು ವಾರಿಯರ್ಸ್ ತಂಡ ಖರೀದಿಸಿತು. ಡಿ ಕೆಟಗರಿಯ ಎಡಗೈ ವೇಗಿ ಲವಿಶ್ ಕುಶಾಲ್‌ಗೆ ₹6.20 ಲಕ್ಷ ನೀಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಅಚ್ಚರಿ ಮೂಡಿಸಿತು.