

ನವದೆಹಲಿ: ಪ್ರವಾಸಿ ಆಸ್ಟ್ರೇಲಿಯಾದ ವಿರುದ್ಧದ ಕ್ರಿಕೆಟ್ ಸರಣಿಗೆ ಟೀಮ್ ಇಂಡಿಯಾ ಮಾಜಿ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ 19 ವಯೋಮಿತಿಯ ಭಾರತದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೆಪ್ಟೆಂಬರ್ 21ರಿಂದ ನಡೆಯಲಿರುವ 3 ಏಕದಿನ ಹಾಗೂ 2 ಚರ್ತುದಿನ ಪಂದ್ಯಗಳಿಗೆ ಶನಿವಾರ ಕಿರಿಯರ ಆಯ್ಕೆ ಸಮಿತಿ, ಭಾರತ ತಂಡವನ್ನು ಹೆಸರಿಸಿದ್ದು, ಸಮಿತ್ ಜತೆಗೆ ಕೆಪಿ ಕಾರ್ತಿಕೇಯ, ಹಾರ್ದಿಕ್ ರಾಜ್, ಸಮರ್ಥ ಎನ್. ತಂಡದಲ್ಲಿರುವ ಇತರ ಮೂವರು ಕನ್ನಡಿಗರಾಗಿದ್ದಾರೆ.
ಪಾಂಡಿಚೇರಿಯಲ್ಲಿ ಸೆ.21, 23 ಮತ್ತು 26ರಂದು ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಉತ್ತರ ಪ್ರದೇಶದ ಮೊಹಮದ್ ಅಮಾನ್ ತಂಡವನ್ನು ಮುನ್ನಡೆಸಲಿದ್ದಾರೆ. ಬಳಿಕ ಸೆ. 30ರಿಂದ ಅ.3ರವರೆಗೆ ಮತ್ತು ಅ. 7ರಿಂದ 10ರವರೆಗೆ 2 ಚರ್ತುದಿನ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿದ್ದು, ಈ ಸರಣಿಯಲ್ಲಿ ಮಧ್ಯಪ್ರದೇಶದ ಸೋಹಮ್ ಪಟವರ್ಧನ್ ನಾಯಕತ್ವ ವಹಿಸಲಿದ್ದಾರೆ.
ಆಲ್ರೌಂಡರ್ ಸಮಿತ್ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ಪರ ಆಡುತಿದ್ದು, ಇದುವರೆಗಿನ ಏಳು ಇನಿಂಗ್ಸ್‌ಗಳಲ್ಲಿ 82 ರನ್ ಕಲೆಹಾಕಿದ್ದಾರೆ. ಆದರೆ ವರ್ಷಾರಂಭದಲ್ಲಿ ಕೂಚ್ ಬೆಹಾರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸಮಿತ್, ಕರ್ನಾಟಕ ತಂಡ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 18 ವರ್ಷದ ಸಮಿತ್ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 362 ರನ್ ಹಾಗೂ 16 ವಿಕೆಟ್ ಪಡೆದಿದ್ದಾರೆ. ಮತ್ತೋರ್ವ ಆಲ್ರೌಂಡರ್ ಹಾರ್ದಿಕ್ ರಾಜ್ ಏಕದಿನ ಸರಣಿಗೆ ಮಾತ್ರ ಸ್ಥಾನ ಪಡೆದಿದ್ದಾರೆ.
ಏಕದಿನ ಸರಣಿ ತಂಡ: ರುದ್ರ ಪಟೇಲ್, ಸಾಹಿಲ್ ಪರಾಖ್, ಕಾರ್ತಿಕೇಯ ಕೆಪಿ, ಮೊಹಮದ್ ಅಮಾನ್ (ನಾಯಕ), ಕಿರಣ್ ಚೋರ್ಮಲೆ, ಅಭಿಗ್ಯಾನ್ ಕುಂದು (ವಿ.ಕೀ), ಹರ್ವಂಶ್ ಸಿಂಗ್ ಪಾಂಗಾಲಿಯಾ (ವಿ.ಕೀ), ಸಮಿತ್ ದ್ರಾವಿಡ್, ಯುಧಾಜಿತ್ ಗುಹಾ, ಸಮರ್ಥ್ ಎನ್, ನಿಖಿಲ್ ಕುಮಾರ್, ಚೇತನ್ ಶರ್ಮ, ಹಾರ್ದಿಕ್ ರಾಜ್, ರೋಹಿತ್ ರಾಜಾವತ್, ಮೊಹಮದ್ ಅನನ್.
ಚರ್ತುದಿನ ಸರಣಿ: ವೈಭವ್ ಸೂರ್ಯವಂಶಿ, ನಿತ್ಯ ಪಾಂಡ್ಯ, ವಿಹಾನ್ ಮಲ್ಹೋತ್ರಾ, ಸೋಹಮ್ ಪಟವರ್ಧನ್ (ನಾಯಕ), ಕಾರ್ತಿಕೇಯ ಕೆಪಿ, ಸಮಿತ್ ದ್ರಾವಿಡ್, ಅಭಿಗ್ಯಾನ್ ಕುಂದು (ವಿ.ಕೀ), ಹರ್ವಂಶ್ ಸಿಂಗ್ ಪಂಗಾಲಿಯಾ (ವಿ.ಕೀ), ಚೇತನ್ ಶರ್ಮ, ಸಮರ್ಥ್ ಎನ್, ಆದಿತ್ಯ ರಾವತ್, ನಿಖಿಲ್ ಕುಮಾರ್, ಅನ್ಮೋಲ್‌ಜೀತ್ ಸಿಂಗ್, ಆದಿತ್ಯ ಸಿಂಗ್, ಮೊಹಮದ್ ಎನಾನ್.