

ಲಖನೌ: ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 100 ರನ್ಗಳ ಅಂತರದಲ್ಲಿ ಜಯಗಳಿಸುವ ಮೂಲಕ ಹಾಲಿ ಚಾಂಪಿಯನ್ ಆಂಗ್ಲರನ್ನು ಅಧಿಕೃತವಾಗಿ ಟೂರ್ನಿಯಿಂದ ಹೊರದಬ್ಬಿದೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಇದು ಸತತ ಆರನೇ ಜಯವಾಗಿದ್ದು, ಸೆಮಿಫಿನಾಲೆಗೆ ತನ್ನ ಹಾದಿಯನ್ನು ಸುಗಮವಾಗಿಸಿಕೊಂಡಿದೆ. ಇದಲ್ಲದೆ ಇಂಗ್ಲೆಂಡ್ ವಿರುದ್ಧ ಏಕದಿನ ವಿಶ್ವಕಪ್ನಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ಗೆಲುವು ಸಾಧಿಸಿದೆ. 2003ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ಕಡೆಯದಾಗಿ ಇಂಗ್ಲೆಂಡ್ ವಿರುದ್ಧ ಜಯಿಸಿತ್ತು.
ಇನ್ನು ಪಂದ್ಯದ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ನಾವು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದೇವೆ ಮತ್ತು 230 ರನ್ಗಳನ್ನು ಬೆನ್ನಟ್ಟುವಾಗಲೂ ನಾವು ಮತ್ತೊಮ್ಮೆ ಅದೇ ಹಳೆಯ ತಪ್ಪುಗಳನ್ನು ಮಾಡಿದೆವು. ಇಬ್ಬನಿ ಬರುತ್ತದೋ ಇಲ್ಲವೋ ಎಂಬ ಕಲ್ಪನೆಯೂ ಇರಲಿಲ್ಲ.
ನಮ್ಮ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದರು. ಆದರೆ ಬ್ಯಾಟಿಂಗ್ಗೆ ಬಂದಾಗ ನಮ್ಮಲ್ಲಿ ಉತ್ತಮ ಜೊತೆಯಾಟ ಬರಲಿಲ್ಲ. ಹೀಗಾಗಿ ನಾವು ಒತ್ತಡಕ್ಕೆ ಸಿಲುಕಿದವು. ಆದರೆ ಸ್ಕೋರ್ಬೋರ್ಡ್ ನೋಡಿದರೆ ನಮ್ಮ ಮೇಲೆ ಯಾವುದೇ ಒತ್ತಡ ಇರಲಿಲ್ಲ, ಆದರೆ ನಾವು ಎಲ್ಲೋ ಎಡವುತ್ತಿದ್ದೇವೆ ಮತ್ತು ತಂಡದ ಅಗ್ರ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ.
ಇದೇ ವೇಳೆ ಇಂದಿನ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಪ್ರವೇಶಿಸಿದ್ದರೆ ಪಾಯಿಂಟ್ ಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿದೆ. ಇನ್ನೊಂದೆಡೆ ಸತತ ಸೋಲುಗಳಿಂದ ತತ್ತರಿಸಿರುವ ಇಂಗ್ಲೆಂಡ್ ಐದನೇ ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ತಲುಪಿದೆ. ಉಳಿದಿರುವ ಮೂರು ಪಂದ್ಯಗಳನ್ನು ಗೆದ್ದರೂ ಇಂಗ್ಲೆಂಡ್ ಸೆಮಿಫಿನಾಲೆ ತಲುಪುವುದು ಅಸಾಧ್ಯ ಎಂದು ಕ್ರಿಕೆಟ್ ಪಂಡಿತರು ಹೇಳಿದ್ದಾರೆ.