

ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ರಾಜ್ಯ ಮಟ್ಟದ ‘ದಸರಾ ಮುಖ್ಯಮಂತ್ರಿ ಕಪ್’ ಕ್ರೀಡಾಕೂಟವನ್ನು ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮಹಿಳಾ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಕೊಟ್ಟ ಸಾಕ್ಷಿ ಮಲಿಕ್ ಉದ್ಘಾಟಿಸಲಿದ್ದಾರೆ.
ದಸರಾ ಕ್ರೀಡಾ ಉಪ ಸಮಿತಿಯು ಈ ಸಂಬಂಧ ಸಾಕ್ಷಿ ಮಲಿಕ್ ಅವರೊಂದಿಗೆ ಮಾತುಕತೆ ನಡೆಸಿದ್ದು, ದಸರಾ ಕ್ರೀಡಾಕೂಟ ಉದ್ಘಾಟನೆಗೆ ಆಗಮಿಸುವಂತೆ ಕೋರಿದೆ. ಇದಕ್ಕೆ ಸಾಕ್ಷಿ ಮಲ್ಲಿಕ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಉದ್ಘಾಟನಾ ದಿನಾಂಕ ಬದಲು: ಆರಂಭದಲ್ಲಿ ದಸರಾ ಕ್ರೀಡಾಕೂಟವನ್ನು ಸೆ.26 ರಿಂದ 29ರವರೆಗೆ ಆಯೋಜಿಸಲು ಚಿಂತಿಸಲಾಗಿತ್ತು. ಸೆ.26ರಂದು ದಸರಾ ಕ್ರೀಡಾಕೂಟದ ಉದ್ಘಾಟನೆ ನಡೆಯಬೇಕಿತ್ತು. ಆದರೀಗ ತಾಂತ್ರಿಕ ಕಾರಣಗಳಿಂದ ದಸರಾ ಕ್ರೀಡಾಕೂಟವನ್ನು ಸೆ.29 ರಿಂದ ಅ.2ವರೆಗೆ ನಡೆಸಲು ಕ್ರೀಡಾ ದಸರಾ ಉಪ ಸಮಿತಿ ನಿರ್ಧರಿಸಿದೆ.
ಈ ಮೊದಲು 26 ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಸಾಕ್ಷಿ ಮಲಿಕ್ ಅವರಿಗೆ ಕ್ರೀಡಾ ಉಪ ಸಮಿತಿ ತಿಳಿಸಿತ್ತು. ಅಂದೇ ಆಗಮಿಸುವಂತೆ ಕೋರಿತ್ತು. ಆದರೀಗ ಕ್ರೀಡಾಕೂಟದ ದಿನಾಂಕ ಬದಲಾಗಿದ್ದು, ಮತ್ತೆ ಸಾಕ್ಷಿ ಮಲಿಕ್ ಜತೆ ಮಾತುಕತೆ ನಡೆಸುತ್ತಿದೆ.
ಯಾರಿದು ಸಾಕ್ಷಿ ಮಲಿಕ್?: 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಮಲಿಕ್ ಹೊಸ ಇತಿಹಾಸ ಬರೆದಿದ್ದರು. ಕ್ರೀಡಾಕೂಟದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದು ಕೊಟ್ಟಿದ್ದರು. ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿ ಪಟು ಹಾಗೂ ದೇಶದ ನಾಲ್ಕನೇ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಮಹಿಳೆಯರ ಫ್ರೀ ಸ್ಟೈಲ್ 58 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸಾಕ್ಷಿ ಈ ಸಾಧನೆ ಮಾಡಿದ್ದರು. ಅಂದು ಸಾಕ್ಷಿ ಅವರು ಫೈನಲ್ ಪಂದ್ಯದಲ್ಲಿ 0-5ರಲ್ಲಿ ಹಿನ್ನಡೆ ಅನುಭವಿಸಿದರೂ ಕೊನೆ 2 ನಿಮಿಷಗಳಲ್ಲಿ ಅದ್ಭುತ ಪಟ್ಟುಗಳನ್ನು ಹಾಕಿ ಎದುರಾಳಿಯನ್ನು ಸೋಲಿಸಿ, ಸಂಭ್ರಮಿಸಿದ್ದರು.
ಸಾಕ್ಷಿ 1992ರಂದು ಹರ್ಯಾಣದ ರೋಹ್ಟಕ್‌ನಲ್ಲಿ ಸುದೇಶ್ ಮಲಿಕ್ ಮತ್ತು ಸುಖ್ಖೀರ್ ಮಲಿಕ್ ದಂಪತಿ ಪುತ್ರಿಯಾಗಿ ಜನಿಸಿದರು. 12ರ ಹರೆಯದಲ್ಲಿಯೇ ಚೋಟ ರಾಮ್ ಕ್ರೀಡಾಂಗಣದ ಕುಸ್ತಿ ಅಖಾಡದಲ್ಲಿ ಈಶ್ವರ್ ದಹಿಯಾ ಎಂಬುವರ ಮಾರ್ಗದರ್ಶನಲ್ಲಿ ಕುಸ್ತಿ ತರಬೇತಿ ಪಡೆಯಲು ಆರಂಭಿಸಿದ್ದರು. ಆದರೆ ಆರಂಭದಲ್ಲಿ ಕುಸ್ತಿ ಅಭ್ಯಾಸಕ್ಕೆ ಅವರಿಗೆ ವಿರೋಧ ಇತ್ತು. ಕುಸ್ತಿ ಹುಡುಗರ ಕ್ರೀಡೆ ಎಂಬ ಭಾವನೆ ಸ್ಥಳೀಯರಲ್ಲಿತ್ತು. ಆದರೆ ಸಾಕ್ಷಿ ಎಲ್ಲವನ್ನೂ ಮೀರಿ ಅಪಾರ ಸಾಧನೆ ಮಾಡಿದ್ದಾರೆ. ಹೆತ್ತವರ ಪ್ರೋತ್ಸಾಹದಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. ಇಂದು ದಸರಾ ಕ್ರೀಡಾಕೂಟ ಉದ್ಘಾಟನಾ ಗೌರವಕ್ಕೂ ಪಾತ್ರರಾಗಿದ್ದಾರೆ.
ಪಿ.ವಿ.ಸಿಂಧು ಉದ್ಘಾಟನೆ
ಕರೊನಾ ಕಾರಣದಿಂದ 2020 ಹಾಗೂ 2021 ನೇ ಸಾಲಿನಲ್ಲಿ ದಸರಾ ಕ್ರೀಡಾಕೂಟ ಆಯೋಜಿಸಿರಲಿಲ್ಲ. 2019ರಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದರು. 2018ರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅಥ್ಲೀಟ್, ಕೊಡಗಿನ ಎಂ.ಆರ್.ಪೂವಮ್ಮ ಉದ್ಘಾಟಿಸಿದ್ದರು. 2017ರಲ್ಲಿ ಹೆಸರಾಂತ ಮಹಿಳಾ ಕ್ರಿಕೆಟ್‌ಪಟುಗಳಾದ ವೇದಾಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದರು. 2014 ರಲ್ಲಿ ಪರ್ವತಾರೋಹಿ ಅರುಣಿಮಾ ಸಿನ್ಹಾ ಉದ್ಘಾಟಿಸಿದ್ದರು.
ಈ ಬಾರಿಯ ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಿರುವ ರಾಜ್ಯ ಮಟ್ಟದ ‘ದಸರಾ ಮುಖ್ಯಮಂತ್ರಿ ಕಪ್’ ಕ್ರೀಡಾಕೂಟವನ್ನು ಸಾಕ್ಷಿ ಮಲಿಕ್ ಅವರಿಂದ ಉದ್ಘಾಟಿಸಲು ಚಿಂತಿಸಲಾಗಿದೆ. ಈ ಸಂಬಂಧ ಸಾಕ್ಷಿ ಮಲಿಕ್ ಅವರಲ್ಲಿಯೂ ಮಾತುಕತೆ ನಡೆಸಲಾಗಿದ್ದು, ಬರಲು ಒಪ್ಪಿಗೆ ಸೂಚಿಸಿದ್ದಾರೆ.ರೋಹಿತ್ ಗಂಗಾಧರ್, ಕ್ರೀಡಾ ಉಪ ಸಮಿತಿ ಕಾರ್ಯದರ್ಶಿ.