

ನವದೆಹಲಿ: ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸಾಮಾಜಿಕ ಜಾಲತಾಣದಲ್ಲಿ ತನ್ನನ್ನು ಟ್ರೋಲ್ ಮಾಡಿದವರಿಗೆ ದಿಟ್ಟ ತಿರುಗೇಟು ನೀಡಿದ್ದಾರೆ. ಕಳೆದ ಕೆಲ ಸಮಯದಿಂದ ಸಾಮಾಜಿಕ ಜಾಲತಾಣದಲ್ಲಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಸೈನಾ ಮತ್ತು ಅಭಿಮಾನಿಗಳ ನಡುವೆ ತಿಕ್ಕಾಟಗಳು ನಡೆಯುತ್ತಲೇ ಬರುತ್ತಿವೆ.
ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್ ಬಗ್ಗೆ ಸೈನಾ ನೀಡಿದ ಹೇಳಿಕೆಯೊಂದು ಕೂಡ ಇದೇ ರೀತಿ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿದ ಸೈನಾ ಪತಿ ಪಾರುಪಳ್ಳಿ ಕಶ್ಯಪ್, 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಸೈನಾಗೆ ಕಂಚಿನ ಪದಕವನ್ನು ಉಡುಗೊರೆ ನೀಡಲಾಗಿತ್ತು ಎಂದೇ ಜನರು ಯೋಚಿಸುತ್ತಾರೆ ಎಂದಿದ್ದರು. ಪತಿಯ ಮಾತಿನ ನಂತರ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗಳು ಇನ್ನಷ್ಟು ಹೆಚ್ಚಾದ ಬಗ್ಗೆ ಪ್ರತಿಕ್ರಿಯಿಸಿರುವ ಸೈನಾ ನೆಹ್ವಾಲ್, "ನನಗೆ ಒಲಿಂಪಿಕ್ಸ್ನಲ್ಲಿ ಪದಕ ಉಡುಗೊರೆ ಲಭಿಸಿತು ಎಂದು ಯೋಚಿಸುವವರು ಮೊದಲಿಗೆ ತಾನು ಒಲಿಂಪಿಕ್ಸ್ಗೆ ಕನಿಷ್ಠ ಅರ್ಹತೆ ಪಡೆಯುವ ಸಾಮರ್ಥ್ಯವನ್ನಾದರೂ ಹೊಂದಿದ್ದೇನೆಯೇ ಎಂಬುದನ್ನು ಅರಿತುಕೊಳ್ಳಬೇಕು' ಎಂದಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕದ ಹೋರಾಟದ ವೇಳೆ ಎದುರಾಳಿ ಚೀನಾ ಆಟಗಾರ್ತಿ ವಾಂಗ್ ಕ್ಸಿನ್ ಮೊದಲ ಗೇಮ್ ಗೆದ್ದು ಮುನ್ನಡೆ ಸಾಧಿಸಿದ್ದರೂ, 2ನೇ ಗೇಮ್ ವೇಳೆ ಮೊಣಕಾಲು ಗಾಯಕ್ಕೆ ತುತ್ತಾದ ಕಾರಣ ಪಂದ್ಯವನ್ನು ಅರ್ಧದಲ್ಲೇ ತ್ಯಜಿಸಿದ್ದರು. ಹೀಗಾಗಿ ಒಲಿಂಪಿಕ್ಸ್ ನಿಯಮಾವಳಿ ಪ್ರಕಾರ ಆಗ ಸೈನಾಗೆ ಹಿನ್ನಡೆಯಲ್ಲಿದ್ದ ನಡುವೆಯೂ ಕಂಚಿನ ಪದಕ ಒಲಿದಿತ್ತು.
ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕುಸ್ತಿಪಟು ವಿನೇಶ್ ಪೋಗಟ್ ಅಧಿಕ ದೇಹತೂಕದಿಂದಾಗಿ ಅನರ್ಹಗೊಂಡಾಗ ಸೈನಾ ನೀಡಿದ ಹೇಳಿಕೆಯೊಂದು ಹಲವು ನೆಟ್ಟಿಗರ ಆಕ್ಷೇಪಕ್ಕೆ ಕಾರಣವಾಗಿತ್ತು. ಕ್ರೀಡಾಪಟುಗಳಿಂದ ಈ ರೀತಿಯ ತಪ್ಪುಗಳು ಆಗಬಾರದು ಎಂದು ಸೈನಾ ಹೇಳಿದ್ದರು. ಇದಕ್ಕಾಗಿ ಹಲವರು ಸೈನಾರನ್ನು ಟೀಕಿಸಿದ್ದರು.