ಡೆನ್ಮಾರ್ಕ್ ಓಪನ್‌ನಿಂದ ಹಿಂದೆ ಸರಿದ ಗಂಡ-ಹೆಂಡತಿ! ಜನವರಿವರೆಗೆ ಕಣಕ್ಕಿಳಿಯಲ್ಲ

saina web
Published on

ನವದೆಹಲಿ: ಭಾರತೀಯ ಬ್ಯಾಡ್ಮಿಂಟನ್‌ನ ಸ್ಟಾರ್ ದಂಪತಿ ಸೈನಾ ನೆಹ್ವಾಲ್ ಮತ್ತು ಪಾರುಪಳ್ಳಿ ಕಶ್ಯಪ್ ಮುಂಬರುವ ಡೆನ್ಮಾರ್ಕ್ ಓಪನ್ ಸೂಪರ್ 750 ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅಕ್ಟೋಬರ್ 13ರಿಂದ ಒಡೆನ್ಸ್‌ನಲ್ಲಿ ನಡೆಯಲಿರುವ ಈ ಟೂರ್ನಿಯ ಮೂಲಕ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಸ್ಪರ್ಧೆ ಪುನರಾರಂಭಗೊಳ್ಳುತ್ತಿದೆ. ಆದರೆ ಸೈನಾ-ಕಶ್ಯಪ್ ದಂಪತಿ ಇನ್ನು ಮುಂದಿನ ವರ್ಷದವರೆಗೆ ಮರಳಿ ಕಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ. ಜನವರಿಯಲ್ಲಿ ಏಷ್ಯನ್ ಟೂರ್ ಮೂಲಕ ಬ್ಯಾಡ್ಮಿಂಟನ್ ಕೋರ್ಟ್‌ಗೆ ಮರಳುವುದಾಗಿ ತಿಳಿಸಿದ್ದಾರೆ.

ಸೈನಾ-ಕಶ್ಯಪ್ ಈ ಮುನ್ನ ಡೆನ್ಮಾರ್ಕ್ ಓಪನ್‌ನಲ್ಲಿ ಸ್ಪರ್ಧಿಸುವುದಾಗಿ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಗೆ ತಿಳಿಸಿದ್ದರು. ಆದರೆ ಇದೀಗ ನಿರ್ಧಾರ ಬದಲಾಯಿಸಿದ್ದಾರೆ. ಇದರಿಂದ ಕೂಟದ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತೀಯರು ಕಣಕ್ಕಿಳಿಯುವುದಿಲ್ಲ. ವಿಶ್ವ ಚಾಂಪಿಯನ್ ಪಿವಿ ಸಿಂಧು ಈಗಾಗಲೆ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಟೂರ್ನಿಯಿಂದ ಹೊರಗುಳಿಯಲು ಫಿಟ್ನೆಸ್ ಸಮಸ್ಯೆ ಕಾರಣವಲ್ಲ ಎಂದು ಸ್ಪಷ್ಟಪಡಿಸಿರುವ ಮಾಜಿ ವಿಶ್ವ ನಂ. 1 ಸೈನಾ, ‘ಈ ವರ್ಷ ಬಾಕಿ ಉಳಿದಿರುವ ಕೇವಲ ಒಂದು ಟೂರ್ನಿಗಾಗಿ ಮರಳಿ ಕಣಕ್ಕಿಳಿಯುವುದು ಸರಿ ಎನಿಸುತ್ತಿಲ್ಲ. ಜನವರಿಯಲ್ಲೇ ಮತ್ತೆ ಆಡುವುದು ಉತ್ತಮ’ ಎಂದಿದ್ದಾರೆ.

ವಿಶ್ವ ನಂ. 24 ಕಶ್ಯಪ್ ಕರೊನಾ ಹಾವಳಿಯ ನಡುವೆ ಒಂದೇ ಟೂರ್ನಿಯಲ್ಲಿ ಆಡುವ ಅಪಾಯ ಎದುರಿಸಲು ಸಿದ್ಧವಿಲ್ಲ ಎಂದಿದ್ದು, ಮುಂದಿನ ವರ್ಷ ತಾಜಾತನದೊಂದಿಗೆ ಮರಳುವುದಾಗಿ ಹೇಳಿದ್ದಾರೆ. ಡೆನ್ಮಾರ್ಕ್ ಓಪನ್ ಜತೆಗೆ ಥಾಮಸ್ ಮತ್ತು ಉಬೆರ್ ಕಪ್ ಕೂಡ ನಿಗದಿಯಾಗಿದ್ದರೂ, ಈಗ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ.

ಕಿಡಂಬಿ ಶ್ರೀಕಾಂತ್, ಲಕ್ಷ್ಯ ಸೇನ್, ಅಜಯ್ ಜಯರಾಮ್, ಶುಭಾಂಕರ್ ಡೇ ಡೆನ್ಮಾರ್ಕ್ ಓಪನ್‌ನಲ್ಲಿ ಆಡಲಿರುವ ಭಾರತೀಯರಾಗಿದ್ದಾರೆ. ಕಳೆದ ಮಾರ್ಚ್‌ನಲ್ಲಿ ನಡೆದ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಬಳಿಕ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಸ್ಪರ್ಧೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net