

ನವದೆಹಲಿ: ಕೋವಿಡ್ 19 ಲಾಕ್ಡೌನ್ನಿಂದ ರಾಷ್ಟ್ರದಲ್ಲಿ ಸ್ಥಗಿತಗೊಂಡಿರುವ ಕ್ರೀಡಾ ಚಟುವಟಿಕೆಯನ್ನು ಪುನರಾರಂಭಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಸಿದ್ಧತೆಗಳನ್ನು ಆರಂಭಿಸಿದೆ. ಮೊದಲ ಭಾಗವಾಗಿ ಇದಕ್ಕೆ ಪೂರಕವಾದ ರೂಪುರೇಷೆಗಳನ್ನು ಸಿದ್ಧಪಡಿಸಲು ಆರು ಸದಸ್ಯರ ಸಮಿತಿಯನ್ನು ರಚಿಸಿದೆ.
ಸಾಯ್ನ ಕಾರ್ಯದರ್ಶಿ ಹಾಗೂ ಆಡಳಿತ ವಿಭಾಗದ ಮುಖ್ಯಸ್ಥ ರೋಹಿತ್ ಭಾರದ್ವಜ್ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಂನ (ಟಾಪ್ಸ್) ಸಿಇಒ ಕಮಾಡರ್ ರಾಜಗೋಪಾಲನ್, ಕಾರ್ಯಾಚರಣೆ ವಿಭಾಗದ ಕಾರ್ಯಕಾರಿ ನಿರ್ದೇಶಕ ಡಾ. ಎಸ್.ಎಸ್. ರಾಯ್, ಡಾ. ಸರಳಾ, ಸಫ್ದರ್ಜಂಗ್ ಆಸ್ಪತ್ರೆಯ ಕ್ರೀಡಾ ಗಾಯಗಳ ವಿಭಾಗದ ಮುಖ್ಯಸ್ಥ ಡಾ. ಬಿ.ಕೆ. ನಾಯಕ್ ಮತ್ತು ಟಾಪ್ಸ್ನ ಸಹಾಯಕ ನಿರ್ದೇಶಕ ಕೆ. ಸಚಿನ್ ಈ ಸಮಿತಿಯ ಇತರ ಸದಸ್ಯರಾಗಿರುತ್ತಾರೆ.
ಇದನ್ನೂ ಓದಿ: ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಟ!
ಸಾಯ್ ಮಾನ್ಯತೆ ಹೊಂದಿರುವ ಕೇಂದ್ರಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಪುನರಾರಂಭಿಸುವುದು ಸಮಿತಿ ಎದುರಿಗಿರುವ ದೊಡ್ಡ ಸವಾಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರಿನ ಸಾಯ್ ಹಾಗೂ ಪಾಟಿಯಾಲದ ಸಾಯ್ ಕೇಂದ್ರಗಳಲ್ಲಿ ತರಬೇತಿ ಕಾರ್ಯಕ್ರಮಗಳು ಮರುಆರಂಭಗೊಳ್ಳಲಿವೆ. ಶೂಟಿಂಗ್ ಮತ್ತು ಅಥ್ಲೆಟಿಕ್ಸ್ ವಿಭಾಗದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ನಂತರದಲ್ಲಿ ಹಂತ ಹಂತವಾಗಿ ಇತರೆ ಕೇಂದ್ರಗಳಲ್ಲೂ ಕ್ರೀಡಾ ಚಟುವಟಿಕೆಗಳು ಆರಂಭವಾಗಲಿವೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜ್ಜಿಜು ಕೂಡ ಮೇ ಕೊನೆಯ ವಾರದಲ್ಲಿ ಕ್ರೀಡಾ ಚಟುವಟಿಕೆಗಳು ಮರುಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದಿರುವ ಕ್ರೀಡಾಪಟುಗಳನ್ನು ಗುರಿಯಾಗಿಸಿಕೊಂಡು ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಇದೀಗ ಎರಡು ಸಾಯ್ ಕೇಂದ್ರಗಳಲ್ಲಿ ಕ್ರೀಡಾ ಚಟುವಟಿಕೆಗಳು ಪುನರಾರಂಭಗೊಳ್ಳುವ ಸಾಧ್ಯತೆಗಳು ಕಂಡುಬರಲಾರಂಭಿಸಿವೆ.