ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ದಿಢೀರ್​ ಮುಂದೂಡಿಕೆ

eng vs sa web
Published on

ಕೇಪ್‌ಟೌನ್: ಜಗತ್ತಿನೆಲ್ಲೆಡೆ ಕರೊನಾ ವೈರಸ್ ಹಾವಳಿ ಶುರುವಾದಾಗ ಸುಮಾರು 3 ತಿಂಗಳ ಕಾಲ ಕ್ರಿಕೆಟ್ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಬಳಿಕ ವೈರಸ್ ವಿರುದ್ಧದ ಸುರಕ್ಷಾ ಕವಚದಂತೆ ಬಯೋ-ಬಬಲ್ ವಾತಾವರಣವನ್ನು ನಿರ್ಮಿಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆ ಪುನರಾರಾಂಭಗೊಂಡಿತ್ತು. ಬೆನ್ನಲ್ಲೇ ಒಂದೊಂದಾಗಿ ಟೂರ್ನಿ, ಸರಣಿಗಳು ಇದೇ ವ್ಯವಸ್ಥೆಯಡಿಯಲ್ಲಿ ನಡೆಯಲಾರಂಭಿಸಿದವು. ಆದರೆ ಇದೀಗ ಈ ಬಯೋ-ಬಬಲ್ ವಾತಾವರಣದೊಳಗೂ ಕರೊನಾ ವೈರಸ್ ಪ್ರವೇಶವಾಗಿದೆ. ಇದರಿಂದಾಗಿ ದಕ್ಷಿಣ ಆಫ್ರಿಕಾ ಮತ್ತು ಪ್ರವಾಸಿ ಇಂಗ್ಲೆಂಡ್ ತಂಡಗಳ ನಡುವೆ ಶುಕ್ರವಾರ ನಡೆಯಬೇಕಾಗಿದ್ದ ಮೊದಲ ಏಕದಿನ ಪಂದ್ಯ ಮುಂದೂಡಿಕೆಯಾಗಿದೆ.

ಮಳೆ ಮತ್ತಿತರ ಹವಾಮಾನ ವೈಪರೀತ್ಯ ಅಥವಾ ಭದ್ರತಾ ಕಾರಣಗಳಿಂದ ಈ ಹಿಂದೆ ಕ್ರಿಕೆಟ್ ಪಂದ್ಯಗಳು ಮುಂದೂಡಿಕೆಯಾದ ದೃಷ್ಟಾಂತಗಳು ಸಾಕಷ್ಟಿದ್ದವು. ಇದೀಗ ಕರೊನಾ ಕಾಲದಲ್ಲಿ ಇದೇ ಮೊದಲ ಬಾರಿಗೆ ವೈರಸ್‌ನಿಂದಲೇ ಪಂದ್ಯವೊಂದು ಮುಂದೂಡಿಕೆಯಾಗಿದೆ. ದಕ್ಷಿಣ ಆಫ್ರಿಕಾದ ಆಟಗಾರನೊಬ್ಬನಿಗೆ ಕೋವಿಡ್-19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಿಗದಿಯಾಗಿದ್ದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಭಾನುವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.

ಶುಕ್ರವಾರ ಟಾಸ್‌ಗೆ ಒಂದು ಗಂಟೆಗೂ ಕಡಿಮೆ ಅವಧಿ ಇದ್ದಾಗ ಪಂದ್ಯವನ್ನು ಮುಂದೂಡಲಾಗಿದೆ. ಉಭಯ ತಂಡಗಳ ನಡುವೆ ಈಗಾಗಲೆ 3 ಟಿ20 ಪಂದ್ಯಗಳು ನಡೆದಿದ್ದವು. ಆದರೆ ಟಿ20 ಸರಣಿಯ ವೇಳೆ ಮಾರ್ಗಸೂಚಿ ಉಲ್ಲಂಘನೆಯಾಗಿರುವ ಕಾರಣದಿಂದಾಗಿ ಬಯೋ-ಬಬಲ್‌ನಲ್ಲೂ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಸೋಂಕು ದೃಢಪಟ್ಟಿರುವ ಆಟಗಾರನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.

ಎಲ್ಲ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ವರ್ಗಕ್ಕೆ ಶುಕ್ರವಾರ ಮಧ್ಯಾಹ್ನದ ನಂತರ ಮತ್ತೊಮ್ಮೆ ಕರೊನಾ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ವರದಿ ಬಂದರೆ ಭಾನುವಾರ ಪಂದ್ಯ ನಡೆಯಲಿದೆ. ಸೋಮವಾರ ಮತ್ತು ಬುಧವಾರ ಮತ್ತೆರಡು ಏಕದಿನ ಪಂದ್ಯಗಳು ನಿಗದಿಯಾಗಿವೆ. ಉಭಯ ತಂಡಗಳ ಸದಸ್ಯರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

ಕರೊನಾ ಕಾಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡ ಬಳಿಕ ಬಯೋ-ಬಬಲ್ ವಾತಾವರಣದೊಳಗೆ ಕರೊನಾ ಸೋಂಕು ಕಾಣಿಸಿಕೊಂಡಿರುವುದು ಇದೇ ಮೊದಲಾಗಿದೆ. ಬಯೋ-ಬಬಲ್ ವಾತಾವರಣ ಪ್ರವೇಶಿಸುವುದಕ್ಕೆ ಮುನ್ನ ಪಾಕ್ ತಂಡದ ಕೆಲ ಆಟಗಾರರಿಗೆ ಸೋಂಕು ದೃಢಪಟ್ಟ ದೃಷ್ಟಾಂತಗಳು ಈಗಾಗಲೆ ಇದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net