

ಢಾಕಾ: ಸತತ ಮೂರನೇ ಮತ್ತು ಒಟ್ಟಾರೆ 10ನೇ ಬಾರಿ ಪ್ರಶಸ್ತಿ ಜಯಿಸುವ ಹಂಬಲದಲ್ಲಿರುವ ಹಾಲಿ ಚಾಂಪಿಯನ್ ಭಾರತ ತಂಡ ಸ್ಯಾಫ್ ಫುಟ್ಬಾಲ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲಿ ಮಂಗಳವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಭಾರತ ತಂಡ ಈ ಮುನ್ನ 1993, 1997, 1999, 2005, 2009, 2011, 2015, 2021, 2023ರಲ್ಲಿ ಪ್ರಶಸ್ತಿ ಜಯಿಸಿತ್ತು. ಈ ಬಾರಿ 2ನೇ ದರ್ಜೆಯ ತಂಡವನ್ನು ಕಣಕ್ಕಿಳಿಸಿರುವ ನಡುವೆಯೂ ಭಾರತ ಮತ್ತೆ ಪ್ರಶಸ್ತಿ ಜಯಿಸುವ ಫೇವರಿಟ್ ಎನಿಸಿದೆ.
ಪಾಕಿಸ್ತಾನ ತಂಡ ಈ ಹಿಂದೆ ಟೂರ್ನಿಯ ಸೆಮಿಫೈನಲ್ಗೇರಿದ್ದೇ ಶ್ರೇಷ್ಠ ಸಾಧನೆ ಎನಿಸಿತ್ತು. ಈ ಬಾರಿ ಸೆಮೀಸ್ನಲ್ಲಿ ಆತಿಥೇಯ ಬಾಂಗ್ಲಾದೇಶಕ್ಕೆ ಆಘಾತ ನೀಡುವ ಪಾಕ್ ಇದೇ ಮೊದಲ ಬಾರಿ ಫೈನಲ್ಗೇರಿದೆ.
ಟೂರ್ನಿಯ ಲೀಗ್ ಹಂತದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 3-2ರಿಂದ ಗೆಲುವು ಸಾಧಿಸಿತ್ತು. ಆದರೆ ನ.5ರಂದು ನಡೆದಿದ್ದ ಆ ಪಂದ್ಯದ ಮೊದಲಾರ್ಧದಲ್ಲೇ 3 ಗೋಲು ಸಿಡಿಸಿದ್ದ ಭಾರತ, ದ್ವಿತೀಯಾರ್ಧದಲ್ಲಿ ಪಾಕಿಸ್ತಾನದ ಅವಳಿ ಗೋಲುಗಳ ಪ್ರತಿರೋಧ ಎದುರಿಸಿತ್ತು. ಹೀಗಾಗಿ ಈ ಬಾರಿ ಭಾರತ ಎಚ್ಚರಿಕೆಯಿಂದ ಆಡಬೇಕಿದೆ.
ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಭಾರತ-ಪಾಕ್ ಇದುವರೆಗೆ ಒಟ್ಟು 30 ಬಾರಿ ಮುಖಾಮುಖಿ ಆಗಿದ್ದು, ಭಾರತ 17ರಲ್ಲಿ ಗೆದ್ದಿದ್ದರೆ, ಪಾಕ್ 4ರಲ್ಲಿ ಜಯಿಸಿದೆ. 9 ಪಂದ್ಯಗಳು ಡ್ರಾ ಆಗಿವೆ. ಫುಟ್ಬಾಲ್ ಟೂರ್ನಿಯೊಂದರ ಫೈನಲ್ನಲ್ಲಿ ಉಭಯ ತಂಡಗಳು ಮುಖಾಮುಖಿ ಆಗುತ್ತಿರುವುದು ಇದೇ ಮೊದಲಾಗಿದೆ.
ಆರಂಭ: ರಾತ್ರಿ 8.00