

ಬ್ರಿಸ್ಬೇನ್: ಪ್ರತಿಷ್ಠಿತ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ 1-1ರಿಂದ ಸಮಬಲ ಕಂಡ ಬಳಿಕ ಗಾಬಾ ಅಂಗಣದಲ್ಲಿ ಮತ್ತೆ ಮುನ್ನಡೆ ಸಾಧಿಸುವ ಹಂಬಲದೊಂದಿಗೆ ಕಣಕ್ಕಿಳಿದ ಭಾರತ ತಂಡಕ್ಕೆ ಮೊದಲ ದಿನ ಮಳೆ ಅಡಚಣೆಯಿಂದ ನಿರಾಸೆ ಎದುರಾಯಿತು. ಶನಿವಾರ ಆರಂಭಗೊಂಡ ಸರಣಿಯ 3ನೇ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡು, ಆತಿಥೇಯ ಆಸ್ಟ್ರೆಲಿಯಾವನ್ನು ಬೇಗನೆ ಕಟ್ಟಿಹಾಕುವ ರೋಹಿತ್ ಶರ್ಮ ಬಳಗದ ಆಸೆಗೆ ಮಳೆ ತಣ್ಣೀರು ಎರಚಿತು. ಇಡೀ ದಿನದಾಟದಲ್ಲಿ ಕೇವಲ 13.2 ಓವರ್ ಆಟವಷ್ಟೇ ನಡೆಯಿತು. ಇದರ ನಡುವೆ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಬ್ರಿಸ್ಬೇನ್ ಟೆಸ್ಟ್ನ ಮೊದಲ ದಿನ ಪ್ರೇಕ್ಷಕರ ಸಾಲಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
ಸಾರಾ ಅವರ ಹಿಂದೆ ಮಾಜಿ ಕ್ರಿಕೆಟಿಗರಾದ ಜಹೀರ್ ಖಾನ್ ಮತ್ತು ಹರ್ಭಜನ್ ಸಿಂಗ್ ಕುಳಿತಿದ್ದರು. ಬ್ರಿಸ್ಬೇನ್ನಲ್ಲಿ ಸಾರಾ ಹಾಜರಿ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಪ್ರೇಮಿಗಳ ಕೌತುಕಕ್ಕೂ ಕಾರಣವಾಯಿತು.
ಸಾರಾ ಕ್ರಿಕೆಟ್ ಅಥವಾ ಕ್ರಿಕೆಟಿಗನ ಮೇಲಿನ ಪ್ರೀತಿಯಿಂದ ಪಂದ್ಯಕ್ಕೆ ಹಾಜರಾದರೇ ಎಂಬ ಪ್ರಶ್ನೆಯೂ ಎದ್ದಿತು. ಯಾಕೆಂದರೆ ಸಾರಾ ಮತ್ತು ಶುಭಮಾನ್ ಗಿಲ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಕಳೆದ ಕೆಲ ಸಮಯದಿಂದ ಬೆನ್ನುಡಿ (ಗಾಸಿಪ್) ಹರಿದಾಡುತ್ತಿದೆ.