

ಲಂಡನ್: ದಿಗ್ಗಜ ಬ್ಯಾಟರ್ ಸಚಿನ್ ತೆಂಡುಲ್ಕರ್ ಗುರುವಾರ 3ನೇ ಟೆಸ್ಟ್ ಪಂದ್ಯ ಆರಂಭಕ್ಕೆ ಮುನ್ನ ಲಾರ್ಡ್ಸ್ನಲ್ಲಿರುವ ಎಂಸಿಸಿ ಮ್ಯೂಸಿಯಂನಲ್ಲಿ ತನ್ನದೇ ಭಾವಚಿತ್ರವನ್ನು ಅನಾವರಣಗೊಳಿಸಿದರು. ಸುಮಾರು 18 ವರ್ಷಗಳ ಹಿಂದೆ ತೆಗೆಯಲಾಗಿರುವ ಸಚಿನ್ ಛಾಯಾಚಿತ್ರವನ್ನು ಆಧರಿಸಿ ಕಲಾವಿದ ಸ್ಟುವರ್ಟ್ ಪಿಯರ್ಸನ್ ರೈಟ್ ಈ ಭಾವಚಿತ್ರವನ್ನು ರಚಿಸಿದ್ದಾರೆ. ಸದ್ಯ ಎಂಸಿಸಿ ಮ್ಯೂಸಿಯಂನಲ್ಲಿರುವ ಈ ಚಿತ್ರ ಮುಂಬರುವ ದಿನಗಳಲ್ಲಿ ಲಾರ್ಡ್ಸ್ ಪೆವಿಲಿಯನ್ಗೆ ಸ್ಥಳಾಂತರಗೊಳ್ಳಲಿದೆ.
"ಇದೊಂದು ದೊಡ್ಡ ಗೌರವ. 1983ರಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಾಗ ನನಗೆ ಮೊದಲ ಬಾರಿಗೆ ಲಾರ್ಡ್ಸ್ ಮೈದಾನದ ಪರಿಚಯವಾಗಿತ್ತು. ನಮ್ಮ ನಾಯಕ ಕಪಿಲ್ ದೇವ್ ಲಾರ್ಡ್ಸ್ನಲ್ಲಿ ಟ್ರೋಫಿ ಎತ್ತುವುದನ್ನು ನೋಡಿದ್ದೆ. ಅಲ್ಲಿಂದಲೇ ನನ್ನ ಕ್ರಿಕೆಟ್ ಪ್ರಯಾಣದ ಕಿಡಿ ಹಚ್ಚಿಕೊಂಡಿತ್ತು. ಇದೀಗ ಅಲ್ಲೇ ನನ್ನ ಭಾವಚಿತ್ರ ಅಳವಡಿಸಿರುವುದರೊಂದಿಗೆ ನನ್ನ ಕ್ರಿಕೆಟ್ ಪ್ರಯಾಣ ಸಂಪೂರ್ಣ ವೃತ್ತವನ್ನು ಸುತ್ತಿದಂತಾಗಿದೆ. ಇದು ನಿಜಕ್ಕೂ ವಿಶೇಷವಾದುದು' ಎಂದು ಸಚಿನ್ ಹೇಳಿದ್ದಾರೆ.
ಪಂತ್ಗೆ ಗಾಯ, ಜುರೆಲ್ ಕೀಪಿಂಗ್:
ರಿಷಭ್ ಪಂತ್ ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನ ಭೋಜನ ವಿರಾಮದ ಬಳಿಕ ವಿಕೆಟ್ ಕೀಪಿಂಗ್ ವೇಳೆ ಎಡಗೈ ತೋರು ಬೆರಳಿಗೆ ಗಾಯಮಾಡಿಕೊಂಡರು. ಬುಮ್ರಾ ಎಸೆದ ಇನಿಂಗ್ಸ್ನ 34ನೇ ಓವರ್ನಲ್ಲಿ ಚೆಂಡು ಹಿಡಿಯುವ ವೇಳೆ ಗಾಯಗೊಂಡು, ನೋವಿನಿಂದ ಒದ್ದಾಡಿದ ಪಂತ್ ಕೂಡಲೆ ಫಿಸಿಯೊ ನೆರವು ಪಡೆದರು. ಆ ಓವರ್ ಮುಗಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪಂತ್ ಮೈದಾನ ತೊರೆದರೆ, ಮೀಸಲು ಆಟಗಾರ ಧ್ರುವ ಜುರೆಲ್ ಕೀಪಿಂಗ್ ನಿರ್ವಹಿಸಿದರು.