ಮುಂಬೈ ಇಂಡಿಯನ್ಸ್​ಗೆ ಹಾರ್ದಿಕ್ ಕ್ಯಾಪ್ಟನ್! ತಂಡದ ಮೆಂಟರ್​ ಸ್ಥಾನ ತ್ಯಜಿಸಿದ ಸಚಿನ್ ತೆಂಡೂಲ್ಕರ್?

ವಿಜಯವಾಣಿ (98)
Published on

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL)​ 2024ರ ಆವೃತ್ತಿಗೆ ಈಗಾಗಲೇ ಸಕಲ ಸಿದ್ಧತೆಗಳು ಬಿರುಸಿನಿಂದ ಸಾಗುತ್ತಿದ್ದು, ಇತ್ತೀಚೆಗಷ್ಟೇ ತೀವ್ರ ವಿವಾದ ಸೃಷ್ಟಿಸಿದ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್​ ಸ್ಥಾನ ಕ್ರಿಕೆಟ್​ ಅಭಿಮಾನಿಗಳಲ್ಲಿ ಭಾರೀ ಅಸಮಾಧಾನ ಮೂಡಿಸಿದೆ. ಸತತವಾಗಿ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಸಾಗುವಂತೆ ನೋಡಿಕೊಂಡಿದ್ದ ರೋಹಿತ್​ ಶರ್ಮಾ ಅವರನ್ನು ನಾಯಕನ ಸ್ಥಾನದಿಂದ ಕೈಬಿಟ್ಟ ಎಂಐ (Mumbai Indians), ಹಾರ್ದಿಕ್​ ಪಾಂಡ್ಯ ಅವರನ್ನು ನೂತನ ಕ್ಯಾಪ್ಟನ್​ ಆಗಿ ಮಾಡಿದೆ. ಈ ವಿಷಯವನ್ನೇ ಇನ್ನು ಅರಗಿಸಿಕೊಳ್ಳಲಾಗದ ಕ್ರಿಕೆಟ್​ ಫ್ಯಾನ್ಸ್​ಗೆ ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಅತೀವ ಬೇಸರವನ್ನು ತಂದೊಡ್ಡಿದೆ.


ಗುಜರಾತ್ ಟೈಟನ್ಸ್​ ತಂಡದ ನಾಯಕನಾಗಿ ಎರಡು ಸೀಸನ್​ಗಳನ್ನು ಮುನ್ನಡೆಸಿದ ಹಾರ್ದಿಕ್ ಪಾಂಡ್ಯ, ಟೈಟನ್ಸ್​ ಕೈಬಿಟ್ಟು ತಮ್ಮ ಹಳೆಯ ಟೀಮ್​ ಮುಂಬೈ ಇಂಡಿಯನ್ಸ್​ಗೆ ಮರಳಿದರು.

ಈ ಮೂಲಕ ಮತ್ತೊಮ್ಮೆ ಮುಂಬೈಗೆ ಬಂದು ಸೇರಿದ ಪಾಂಡ್ಯ, ಏಕಾಏಕಿ ನಾಯಕನ ಸ್ಥಾನದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ, ತಾವು ಎಂಐ ತಂಡದ ನೂತನ ಕ್ಯಾಪ್ಟನ್​ ಆಗಿದ್ದಾರೆ. ಸದ್ಯ ಇದೊಂದು ಸಂಗತಿ ಕ್ರಿಕೆಟ್​ ಅಭಿಮಾನಿಗಳನ್ನು ತೀವ್ರ ಬೇಸರಕ್ಕೆ ದೂಡಿದ್ದು, ಕೇವಲ ಈ ನಿರ್ಧಾರದಿಂದ ತಂಡದ ಮೇಲಿದ್ದ ವಿಶ್ವಾಸ ಮತ್ತು ಪ್ರೀತಿಯನ್ನು ದಿಢೀರ್​ ಕಳೆದುಕೊಂಡಿದೆ.

ಈ ವಿಚಾರಗಳ ಬೆನ್ನಲ್ಲೇ ಇದೀಗ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಕ್ರಿಕೆಟ್ ದಿಗ್ಗಜ, ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್​ ತಮ್ಮ ಸ್ಥಾನಕ್ಕೆ ಗುಡ್​ಬೈ ಹೇಳಿದ್ದಾರೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈಗಾಗಲೇ ಮುಂಬೈ ತಂಡದ ನಿರ್ಧಾರದಿಂದ ಬೇಸತ್ತಿದ್ದ ಅಭಿಮಾನಿಗಳಿಗೆ ಈಗ ಮತ್ತೊಂದು ಶಾಕಿಂಗ್ ಸುದ್ದಿ ಸಾಕಷ್ಟು ಆತಂಕ ಸೃಷ್ಟಿಸಿದೆ.

ಸಚಿನ್​ ತೆಂಡೂಲ್ಕರ್​ ಅವರು ತಮ್ಮ ಮೆಂಟರ್​ ಸ್ಥಾನವನ್ನು ತ್ಯಜಿಸಿದ್ದು, ಇದಕ್ಕೆ ಕಾರಣ ಇತ್ತೀಚೆಗೆ ತಂಡದಲ್ಲಿ ನಡೆದ ನಾಯಕತ್ವ ಬದಲಾವಣೆಯೇ ಕಾರಣ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವದಂತಿಗಳು ತಿಳಿಸಿವೆ. ಸದ್ಯ ಈ ವದಂತಿಗಳು ಎಷ್ಟು ನಿಜ? ಈ ಕುರಿತಂತೆ ಮುಂಬೈ ಇಂಡಿಯನ್ಸ್ ತಂಡದ ಅಧಿಕೃತ ಹ್ಯಾಂಡಲ್​ ಹೇಳುವುದಾದರೂ ಏನು? ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net