VIDEO: ನಿವೃತ್ತಿ ನಂತರ ಮತ್ತೆ ಬ್ಯಾಟ್ ಹಿಡಿದ ಸಚಿನ್​ ತೆಂಡೂಲ್ಕರ್​; ಆಸ್ಟ್ರೇಲಿಯಾದಲ್ಲಿ ಆಡಿದ ಪಂದ್ಯದಲ್ಲಿ ಮೊದಲ ಬೌಲ್​ನಲ್ಲೇ ಬೌಂಡರಿ...

Tendulkar 9 Feb 20
Published on

ಮೆಲ್ಬೋರ್ನ್​: ಕ್ರಿಕೆಟ್​ನ ದಂತಕತೆ ಎಂದೇ ಹೆಸರು ಪಡೆದಿದ್ದ ಸಚಿನ್​ ತೆಂಡೂಲ್ಕರ್ ಅವರು 2013ರಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದಿದ್ದಾರೆ.

ಅದಾದ ಬಳಿಕ 2014ರಲ್ಲಿ ಮೆಲ್ಬೋರ್ನ್​ ಕ್ರಿಕೆಟ್​ ಕ್ಲಬ್​ನಿಂದ ನಡೆದ ಎಕ್ಸಿಬಿಷನ್​ ಪಂದ್ಯದಲ್ಲಿ ಆಡಿದ್ದರು.

ಈಗ ಸುಮಾರು ಐದೂವರೆ ವರ್ಷಗಳ ಬಳಿಕ ಭಾನುವಾರ (ಫೆ.9)ರಂದು ಸಚಿನ್ ತೆಂಡೂಲ್ಕರ್​ ಮತ್ತೊಮ್ಮೆ ಬ್ಯಾಟ್​ ಹಿಡಿಯುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.

ಆಸ್ಟ್ರೇಲಿಯಾದ ಕಾಡ್ಗಿಚ್ಚಿಗೆ ಪರಿಹಾರ ನೀಡುವ ಸಲುವಾಗಿ ಮೆಲ್ಬೋರ್ನ್​ನ ಜಂಕ್ಷನ್​ ಓವಲ್​ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ಸಚಿನ್​ ತೆಂಡೂಲ್ಕರ್​ ಕೂಡ ಬ್ಯಾಟಿಂಗ್​ ಮಾಡಿದ್ದು, ಮೊದಲ ಬೌಲ್​ನ್ನೇ ಬೌಂಡರಿಗೆ ಅಟ್ಟಿದ್ದಾರೆ.

ಪಾಂಟಿಂಗ್​ XI ಮತ್ತು ಗಿಲ್​ಕ್ರಿಸ್ಟ್​ XI ತಂಡಗಳ ನಡುವೆ ತಲಾ 10 ಓವರ್​ನ ಚಾರಿಟಿ ಪಂದ್ಯ ನಡೆದಿತ್ತು. ಇತ್ತೀಚೆಗೆ ಕಾಡ್ಗಿಚ್ಚಿನಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿಯುಂಟಾಗಿದ್ದು ಅದಕ್ಕಾಗಿ ಪರಿಹಾರ ನೀಡಲು ಕ್ರಿಕೆಟ್​ ದಿಗ್ಗಜರು ಈ ಪಂದ್ಯ ಏರ್ಪಡಿಸಿದ್ದರು.

ಅದರಲ್ಲಿ ಪಾಂಟಿಂಗ್​ XI ತಂಡಕ್ಕೆ ಸಚಿನ್ ತೆಂಡೂಲ್ಕರ್​ ಕೋಚ್​ ಆಗಿದ್ದರು. ಆದರೆ ಪಂದ್ಯದ ವೇಳೆ ಆಸ್ಟ್ರೇಲಿಯನ್ ಮಹಿಳಾ ಕ್ರಿಕೆಟರ್​ ಎಲ್ಲಿಸ್​ ಪೆರ್ರಿ ಅವರ ಮನವಿಯ ಮೇರೆಗೆ ಇನ್ನಿಂಗ್ಸ್​ ಬ್ರೇಕ್​ನಲ್ಲಿ ಬ್ಯಾಟ್​ ಮಾಡಿದ್ದಾರೆ. ಎಲ್ಲಿಸ್​ ಅವರ ಬೌಲಿಂಗ್​ ಎದುರಿಸಿದ ಅವರು ಮೊದಲ ಬೌಲ್​ಗೇ ಬೌಂಡರಿ ಹೊಡೆದಿದ್ದಾರೆ. ವಿಡಿಯೋ ಕೂಡ ವೈರಲ್ ಆಗಿದೆ.

ಎಲ್ಲಿಸ್​ ಅವರ ಬೌಲಿಂಗ್​ಗೆ ಸಚಿನ್​ ತೆಂಡೂಲ್ಕರ್​ ಬ್ಯಾಟ್​ ಮಾಡಿದ ವಿಡಿಯೋವನ್ನು ಆಸ್ಟ್ರೇಲಿಯನ್ ಕ್ರಿಕೆಟ್​ ಕೂಡ ಟ್ವೀಟ್ ಮಾಡಿದೆ.

ಸಚಿನ್​ ತೆಂಡೂಲ್ಕರ್​ ಅವರು ಒಂದು ಟೀಂ ಗೆ ಕೋಚ್​ ಆಗಿದ್ದರು. ಆದರೆ ನಿನ್ನೆ ರಾತ್ರಿ ನಾವೊಂದಷ್ಟು ದಿನ ಕುಳಿತು ನಿಮ್ಮ ಕೈಲೂ ಬ್ಯಾಟಿಂಗ್​ ಮಾಡಿಸಲು ನಿರ್ಧರಿಸಿದೆವು. ನಿವೃತ್ತಿಯ ನಂತರ ಮತ್ತೆ ನಿಮ್ಮ ಕ್ರಿಕೆಟ್​ ನೋಡಲು ಸಿಕ್ಕಿದ್ದು ತುಂಬ ಸಂತೋಷ ಕೊಟ್ಟಿದೆ ಎಂದು ಎಲ್ಲಿಸ್​ ಹೇಳಿದ್ದಾರೆ. ಆಸ್ಟ್ರೇಲಿಯನ್ ಕಾಡ್ಗಿಚ್ಚು ಪರಿಹಾರ ಮ್ಯಾಚ್​ನಲ್ಲಿ ಆಡಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net