

ಬರ್ಲಿನ್: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪ್ರತಿಷ್ಠಿತ ಲೌರೆಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2011ರ ಏಕದಿನ ವಿಶ್ವಕಪ್ ಜಯಿಸಿದ ವೇಳೆ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ಅವರನ್ನು ಸಹ ಆಟಗಾರರು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಕ್ಷಣಕ್ಕಾಗಿ ಈ ಪ್ರಶಸ್ತಿ ಲಭಿಸಿದೆ. ಅಭಿಮಾನಿಗಳು ನೀಡಿದ ಮತದ ಅನುಸಾರ ಕಳೆದ 20 ವರ್ಷಗಳಲ್ಲಿ ಅತ್ಯುತ್ತಮ ಕ್ರೀಡಾ ಕ್ಷಣ ಎಂದು ಬಣ್ಣಿಸಲಾಗಿದೆ. ಸಚಿನ್ ತೆಂಡುಲ್ಕರ್ ಅವರಿಗೆ ಅತಿ ಹೆಚ್ಚು ಮತಗಳು ಲಭಿಸಿದ್ದವು,
ಸೋಮವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ಟೆನಿಸ್ ದಿಗ್ಗಜ ಬೊರಿಸ್ ಬೆಕರ್ ಟ್ರೋಫಿ ಘೋಷಿಸಿದರೆ, ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಸಚಿನ್ಗೆ ಪ್ರಶಸ್ತಿ ಪ್ರದಾನ ಮಾಡಿದರು. ಆ ಕ್ಷಣಕ್ಕಾಗಿ ಇಡೀ ದೇಶವೇ ಕಾಯುತ್ತಿದ್ದು, ವಿಶ್ವಕಪ್ ಜಯಿಸುವುದೇ ಒಂದು ಅದ್ಬುತ. ಇಂಥ ಕ್ಷಣವನ್ನು ವರ್ಣಿಸಲು ಸಾಧ್ಯವೇ ಇಲ್ಲ. ಆ ಕ್ಷಣವನ್ನ ಇಡೀ ದೇಶವೇ ಸಂಭ್ರಮಿಸಿದೆ’ ಎಂದು ತೆಂಡುಲ್ಕರ್ ಟ್ರೋಫಿ ಪ್ರದಾನದ ವೇಳೆ ಹೇಳಿಕೊಂಡಿದ್ದಾರೆ.
ಸಚಿನ್ ತೆಂಡುಲ್ಕರ್ ಅವರ 6ನೇ ವಿಶ್ವಕಪ್ ಟೂರ್ನಿ ಅದಾಗಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ನುವಾನ್ ಕುಲಸೇಕರ ಎಸೆತವನ್ನು ಸಿಕ್ಸರ್ಗೆ ಅಟ್ಟುವ ಮೂಲಕ ನಾಯಕ ಮಹೇಂದ ್ರಂಗ್ ಧೋನಿ ಭಾರತದ ಹಲವು ವರ್ಷಗಳ ಕನಸನ್ನು ನನಸಾಗಿದ್ದರು. ಈ ವೇಳೆ ಮೈದಾನಕ್ಕಿಳಿದ ಸಹ-ಆಟಗಾರರು ಸಂಭ್ರಮಿಸುವುದರ ಜತೆಗೆ ಕೊನೇ ವಿಶ್ವಕಪ್ನಲ್ಲಿ ಆಡುತ್ತಿದ್ದ ಸಚಿನ್ ಅವರನ್ನು ಹೆಗಲ ಮೇಲೆ ಹೊತ್ತು ಮೈದಾನದ ಪೂರ್ತಿ ತಿರುಗಿದ್ದರು. ಆ ಭಾವನಾತ್ಮಕ ಕ್ಷಣವನ್ನು ವಿವರಿಸುವಂತೆ ಬೆಕರ್ ಕೇಳಿಕೊಂಡಾಗ ಟ್ರೋಫಿ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡರು. ‘1983ರಲ್ಲಿ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಜಯಿಸಿದಾಗ ನನಗೆ 10 ವರ್ಷ. ಆಗ ನನಗೆ ಏನೆಂದು ಆರ್ಥವಾಗಿರಲಿಲ್ಲ. ಆದರೂ ಎಲ್ಲರೊಂದಿಗೆ ಸಂಭ್ರಮದಲ್ಲಿ ಭಾಗಿಯಾಗಿದ್ದೆ, ಇದರಲ್ಲಿ ಏನೋ ವಿಶೇಷತೆ ಇದೆ ಎಂದು ಗಮನಿಸಿದೆ. ನನ್ನ ಜೀವನದಲ್ಲೂ ಟ್ರೋಫಿ ಜಯಿಸುವ ಅವಕಾಶ ಬಂದಿತು’ ಎಂದು 46 ವರ್ಷದ ಸಚಿನ್ ವಿವರಿಸಿದ್ದಾರೆ.
ಮೆಸ್ಸಿ, ಹ್ಯಾಮಿಲ್ಟನ್ಗೆ ಜಂಟಿ ಪ್ರಶಸ್ತಿ
ವರ್ಷದ ಕ್ರೀಡಾಪಟು ಗೌರವವನ್ನು ಎಫ್1 ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಹಾಗೂ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಜಂಟಿಯಾಗಿ ಹಂಚಿಕೊಂಡರೆ, ಹಲವು ಬಾರಿಯ ವಿಶ್ವ ಚಾಂಪಿಯನ್ ಜಿಮ್ನಾಸ್ಟ್ ಅಮೆರಿಕದ ಸಿಮೋಲ್ ಬಿಲೆಸ್ ವರ್ಷದ ಮಹಿಳಾ ಕ್ರೀಡಾಪಟು ಗೌರವ ಪಡೆದರು. ದಕ್ಷಿಣ ಆಫ್ರಿಕಾ ರಗ್ಬಿ ಟೀಮ್ ವರ್ಷದ ತಂಡ ಗೌರವ ಪಡೆಯಿತು.