

ನ್ಯೂಯಾರ್ಕ್: ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ. 1 ಕಾಲೋಸ್ ಅಲ್ಕರಾಜ್, 3ನೇ ಶ್ರೇಯಾಂಕಿತ ಡೆನಿಲ್ ಮೆಡ್ವೆಡೇವ್, 8ನೇ ಶ್ರೇಯಾಂಕಿತ ಆಂಡ್ರೆ ರುಬ್ಲೆವ್, 12ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೇವ್, ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 2ನೇ ಶ್ರೇಯಾಂಕಿತೆ ಅರಿನಾ ಸಬಲೆಂಕಾ, ಕಿನ್ವೆನ್ ಝೆಂಗ್, 17 ಶ್ರೇಯಾಂಕಿತೆ ಮ್ಯಾಡಿಸನ್ ಕೀಯ್ಸ, ವಿಂಬಲ್ಡನ್ ಚಾಂಪಿಯನ್ ಮಾರ್ಕೆಟಾ ವೊಂಡ್ರೊಸೊವಾ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. 3ನೇ ಶ್ರೇಯಾಂಕಿತೆ ಜೆಸ್ಸಿಕಾ ಪೆಗುಲಾ, 5ನೇ ಶ್ರೇಯಾಂಕಿತೆ ಒನ್ಸ್ ಜಬೇರ್ ಸವಾಲು 4ನೇ ಸುತ್ತಿನಲ್ಲಿ ಅಂತ್ಯಗೊಂಡಿದೆ.
ಸಬಲೆಂಕಾಗೆ ಸುಲಭ ಗೆಲುವು: ಅಗ್ರ ಶ್ರೇಯಾಂಕಿತೆ ಇಗಾ ಸ್ವಿಯಾಟೆಕ್ ನಿರ್ಗಮನದ ಬಳಿಕ ಟೂರ್ನಿಯ ಉನ್ನತ ಶ್ರೇಯಾಂಕಿತೆ ಎನಿಸಿರುವ ಬೆಲಾರಸ್ ಬೆಡಗಿ ಅರಿನಾ ಸಬಲೆಂಕಾ 6-1, 6-3 ನೇರ ಸೆಟ್‌ಗಳಿಂದ 13ನೇ ಶ್ರೇಯಾಂಕಿತೆ ಡೇರಿಯಾ ಕಸಟ್ಕಿನಾ ಎದುರು ಜಯ ಸಾಧಿಸಿ, ಸತತ ಮೂರನೇ ವರ್ಷ ಟೂರ್ನಿಯ ಕ್ವಾರ್ಟರ್‌ೈನಲ್‌ಗೇರಿದರು. ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೂರ್ನಿ ಜಯಿಸಿರುವ ಸಬಲೆಂಕಾ. ವರ್ಷದ ಎರಡನೇ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿದ್ದಾರೆ. ಅಗ್ರ-5 ಶ್ರೇಯಾಂಕಿತರ ಪೈಕಿ ಟೂರ್ನಿಯಲ್ಲಿ ಉಳಿದಿರುವ ಏಕೈಕ ಸ್ಪರ್ಧಿ ಎನಿಸಿದ್ದಾರೆ.
ಪೆಗುಲಾ, ಜಬೇರ್‌ಗೆ ಆಘಾತ: ಹಾಲಿ ರನ್ನರ್ ಅಪ್ ಆಗಿ ಕಣಕ್ಕಿಳಿದಿದ್ದ ಟುನೀಷಿಯಾದ ಒನ್ಸ್ ಜಬೇರ್ 6-2, 6-3 ರಿಂದ ಚೀನಾದ ಝೆಂಗ್ ಕಿನ್ವೆನ್‌ಗೆ ಮಣಿದರು. ಅತಿಥೇಯ ಪೇವರಿಟ್ ಜೆಸ್ಸಿಕಾ ಪೆಗುಲಾ 1-6, 3-6 ರಿಂದ ಮ್ಯಾಡಿಸನ್ ಕೀಯ್ಸ ಎದುರು ಪರಾಭವಗೊಂಡರು. 2017ರ ರನ್ನರ್ ಅಪ್ ಕೀಯ್ಸ ಮುಂದಿನ ಸುತ್ತಿನಲ್ಲಿ ವಿಂಬಲ್ಡನ್ ಚಾಂಪಿಯನ್ ಮಾರ್ಕೆಟಾ ವೊಂಡ್ರೊಸೊವಾಗೆ ಮುಖಾಮುಖಿಯಾಗಲಿದ್ದಾರೆ. ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೊವಾ 6-7, 6-3, 6-2 ರಿಂದ ಶ್ರೇಯಾಂಕ ರಹಿತೆ ಪೇಟನ್ ಸ್ಟರ್ನ್ಸ್ ಎದುರು 2 ಗಂಟೆ 10 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿದರು.