ಮುಂಬೈನಲ್ಲಿ ಎಸ್​ಎ20 ಇಂಡಿಯಾ ಡೇ; ಭಾರತದಲ್ಲಿ ದಕ್ಷಿಣ ಆಫ್ರಿಕಾ ಲೀಗ್​​ಗೆ ಹೆಚ್ಚಿದ ಜನಪ್ರಿಯತೆ

web sa20
Published on

ಮುಂಬೈ: ದಕ್ಷಿಣ ಆಫ್ರಿಕಾದ ಪ್ರಮುಖ ಟಿ20 ಲೀಗ್​ ಆಗಿರುವ ಎಸ್​ಎ20ಯ ಅಭಿಮಾನಿಗಳ ಸಂಖ್ಯೆ ಮತ್ತು ಸಾಂಸ್ಕೃತಿಕ ಬಾಂಧವ್ಯವು ಭಾರತದಲ್ಲಿ ಗಮನಾರ್ಹವಾಗಿ ಹೆಚ್ಚಳ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಕ್ರಿಕೆಟ್​ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ ಮುಂಬೈನಲ್ಲಿ ಬುಧವಾರ ಎಸ್​ಎ20 ಇಂಡಿಯಾ ಡೇ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭವು ಭಾರತ ಉಪಖಂಡದಲ್ಲಿ ಹೆಚ್ಚುತ್ತಿರುವ ಲೀಗ್​ನ ಜನಪ್ರಿಯತೆಯ ಪ್ರಮುಖ ಮೈಲಿಗಲ್ಲನ್ನು ಗುರುತಿಸಿತು.

ಮ್ಯೂಸಿಯಂ ಆಫ್ ಸೊಲುಷನ್ಸ್‌ನಲ್ಲಿ ಆಯೋಜಿಸಲಾಗಿದ್ದ ಈ ಸಂಭ್ರಮಾಚರಣೆಯು ಲೀಗ್ ಆಯುಕ್ತ  ಗ್ರೇಮ್ ಸ್ಮಿತ್, ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ತಾರೆಯರಾದ ಫಾಫ್​ ಡು ಪ್ಲೆಸಿಸ್​ (ಜೋಬರ್ಗ್‌ ಸೂಪರ್‌ ಕಿಂಗ್ಸ್‌), ಡೇವಿಡ್‌ ಮಿಲ್ಲರ್‌ (ಪಾರ್ಲ್‌ ರಾಯಲ್ಸ್‌), ಟಾಮ್‌ ಮೂಡಿ (ಡರ್ಬಾನ್ಸ್‌ ಸೂಪರ್‌ ಜೈಂಟ್ಸ್‌), ಹಾಶಿಂ ಆಮ್ಲ (ಎಂಐ ಕೇಪ್‌ಟೌನ್‌) ಮತ್ತು ಮಾರ್ಕ್‌ ಬೌಷರ್‌ ಅವರನ್ನೆಲ್ಲ ಒಂದು ಗೂಡಿಸಿತು.

ಟ್ರಿಸ್ಟನ್ ಸ್ಟಬ್ಸ್ (ಸನ್‌ರೈಸರ್ಸ್ ಈಸ್ಟರ್ನ್ ಕೇಪ್), ಆ್ಯಡ್ರಿಯನ್ ಬಿರೆಲ್ (ಸನ್‌ರೈಸರ್ಸ್ ಈಸ್ಟರ್ನ್ ಕೇಪ್‌ನ ಮುಖ್ಯ ತರಬೇತುದಾರ) ಮತ್ತು ಸೌರವ್ ಗಂಗೂಲಿ (ಪ್ರಿಟೋರಿಯಾ ಕ್ಯಾಪಿಟಲ್ಸ್‌ನ ಮುಖ್ಯ ತರಬೇತುದಾರ) ಅವರು ಈ ಕಾರ್ಯಕ್ರಮದಲ್ಲಿ ವಿಶೇಷ ವಿಡಿಯೊ ಸಂದೇಶದ ಮೂಲಕ ಭಾಗವಹಿಸಿ, 4ನೆ ಆವೃತ್ತಿಗೆ ಬೆಂಬಲ ಸೂಚಿಸಿದರು. ಫ್ರ್ಯಾಂಚೈಸಿ ಪ್ರತಿನಿಧಿಗಳು ಮತ್ತು ಪಂದ್ಯಗಳ ಅಧಿಕೃತ ಪ್ರಸಾರ ಸಂಸ್ಥೆಯಾಗಿರುವ ಜಿಯೊಸ್ಟಾರ್‌ನ ಅಧಿಕಾರಿಗಳು ಎಸ್‌ಎ20 ಲೀಗ್‌ನ ಜನಪ್ರಿಯತೆ ಹೆಚ್ಚಳದ ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.

ತನ್ನ ಮೊದಲ ಮೂರು ಆವೃತ್ತಿಗಳಲ್ಲಿ, ಎಸ್‌ಎ20 ಭಾರತದ ಹೊರಗಿನ ಅತಿದೊಡ್ಡ ಟಿ20 ಲೀಗ್ ಆಗಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಕೇನ್ ವಿಲಿಯಮ್ಸನ್, ಜೋ ರೂಟ್, ಜೋಸ್ ಬಟ್ಲರ್, ಸುನಿಲ್ ನರೈನ್, ಆ್ಯಂಡ್ರೆ ರಸೆಲ್, ಟ್ರೆಂಟ್ ಬೌಲ್ಟ್ ಅವರಂಥ ವಿಶ್ವ ದರ್ಜೆಯ ಅಂತಾರಾಷ್ಟ್ರೀಯ ಕ್ರಿಕೆಟ್‌ ತಾರೆಯರು, ದಕ್ಷಿಣ ಆಫ್ರಿಕಾದ ಪ್ರವರ್ಧಮಾನಕ್ಕೆ ಬರುತ್ತಿರುವ ಡೆವಾಲ್ಡ್ ಬ್ರೆವಿಸ್, ಟ್ರಿಸ್ಟಾನ್ ಸ್ಟಬ್ಸ್, ಕ್ವೆನಾ ಮಫಾಕಾ, ರೆಯಾನ್ ರಿಕಲ್ಟನ್ ಅವರಂತಹ ಆಟಗಾರರ ಜೊತೆ ಬಲಿಷ್ಠ ಫ್ರಾಂಚೈಸಿ ಮತ್ತು ಪ್ರಸಾರ ಬೆಂಬಲದ ಜೊತೆಗೆ ಆಟವಾಡುತ್ತಿದ್ದಾರೆ. 3ನೆ ಆವೃತ್ತಿಯ ಫೈನಲ್‌ ಪಂದ್ಯದ ಟಿಕೆಟ್‌ಗಳು ಸತತ ಮೂರನೇ ಬಾರಿಗೆ ಸಂಪೂರ್ಣವಾಗಿ ಮಾರಾಟವಾಗಿರುವುದೂ ಸೇರಿದಂತೆ ಇತರ ಪಂದ್ಯಗಳ ಟಿಕೆಟ್‌ ಮಾರಾಟದಲ್ಲಿ ಶೇಕಡ 70ರಷ್ಟು ಏರಿಕೆ ಮತ್ತು ಭಾರತ, ಇಂಗ್ಲೆಂಡ್‌, ಅಮೆರಿಕ ಮತ್ತು ಆಫ್ರಿಕಾದ ಮಾರುಕಟ್ಟೆಗಳಾದ್ಯಂತ ವ್ಯಾಪಿಸಿರುವ ಜಾಗತಿಕ ಟೆಲಿವಿಷನ್‌ ವೀಕ್ಷಕರಲ್ಲಿ ಶೇಕಡ 37ರಷ್ಟು ಏರಿಕೆಯೊಂದಿಗೆ ಗಮನಾರ್ಹ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಎಸ್‌ಎ20 ಲೀಗ್‌ನ ಆಯುಕ್ತ ಗ್ರೇಮ್ ಸ್ಮಿತ್ ಅವರು ಪ್ರತಿಕ್ರಿಯಿಸಿ, “ಎಸ್‌ಎ20 ಪಯಣದ ಆರಂಭದಿಂದಲೂ ಭಾರತವು ನಮಗೆ ಅತ್ಯಂತ ಮುಖ್ಯವಾಗಿದೆ. ಐಪಿಎಲ್‌ ಮಾಲೀಕತ್ವದ ತಂಡಗಳ ಬೆಂಬಲ ಮತ್ತು ಜಿಯೋಸ್ಟಾರ್‌ ಜೊತೆಗಿನ ನಮ್ಮ ಪಾಲುದಾರಿಕೆಯೂ ನಮಗೆ ಅಗತ್ಯವಾಗಿದೆ. ಭಾರತದ ಅಭಿಮಾನಿಗಳ ಉತ್ಸಾಹ ಮತ್ತು ಚೇತನವು ಪ್ರತಿ ಋತುವಿನಲ್ಲಿಯೂ ನಮಗೆ ಸ್ಫೂರ್ತಿ ನೀಡುತ್ತಿದೆ. ಎಸ್‌ಎ20 ಜೊತೆಗಿನ ಅವರ ಸಂಪರ್ಕವು ಲೀಗ್‌ನ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ. ನಾವು 4ನೆ ಆವೃತ್ತಿಗೆ ಕಾಲಿಡುತ್ತಿದ್ದಂತೆ, ಆ ಬಾಂಧವ್ಯವನ್ನು ಬಲಪಡಿಸಲು ಮತ್ತು ದಕ್ಷಿಣ ಆಫ್ರಿಕಾ ಮತ್ತು ಭಾರತ ಉಪಖಂಡದಾದ್ಯಂತ ಗಮನ ಸೆಳೆಯುವಂತಹ ಪಂದ್ಯಗಳ ಪ್ರದರ್ಶನ ನೀಡುವುದನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ” ಎಂದು ಹೇಳಿದರು.

ಜೋಬರ್ಗ್ ಸೂಪರ್ ಕಿಂಗ್ಸ್‌ನ ನಾಯಕ ಪಫ್ ಡು ಪ್ಲೆಸಿಸ್ ಅವರು ಮಾತನಾಡಿ, “ಆಟಗಾರರಾಗಿ, ನಾವು ಎಸ್‌ಎ20ಕ್ಕೆ ಸಂಬಂಧಿಸಿದ ಉತ್ಸಾಹವನ್ನು ನಾವು ಕೇವಲ ತಾಯ್ನಾಡಿನಲ್ಲಷ್ಟೇ ಅಲ್ಲದೆ, ಭಾರತದಲ್ಲಿಯೂ ಸಹ ಆನಂದಿಸುತ್ತೇವೆ. ಇದು ವಿಶ್ವದ ಅತ್ಯುತ್ತಮ ಟಿ20 ಲೀಗ್‌ಗಳಲ್ಲಿ ಒಂದಾಗಿದೆ. - ಸ್ಪರ್ಧಾತ್ಮಕತೆ, ಮನರಂಜನೆ ಮತ್ತು ನೈಜ ಜಾಗತಿಕ ಲೀಗ್‌ ಇದಾಗಿದೆ. ಭಾರತದಲ್ಲಿ ಅಭಿಮಾನಿಗಳು ಪಂದ್ಯಗಳನ್ನು ವೀಕ್ಷಿಸುವುದನ್ನು, ಫ್ರಾಂಚೈಸಿಗಳನ್ನು ತಿಳಿದುಕೊಳ್ಳುವುದನ್ನು ಮತ್ತು ನಮ್ಮ ತಂಡಗಳೊಂದಿಗೆ ಸಂಪರ್ಕ ಸಾಧಿಸುವುದನ್ನು ನೋಡುವುದು ನಿಜವಾಗಿಯೂ ವಿಶೇಷ ಸಂಗತಿಯಾಗಿದೆ. ಈ ಲೀಗ್ ಇಷ್ಟು ಕಡಿಮೆ ಸಮಯದಲ್ಲಿ ಏನೆಲ್ಲಾ ಸಾಧಿಸಿದೆ ಎಂಬುದರ ಬಗ್ಗೆ ಇದು ಬಹಳಷ್ಟು ಸಂಗತಿಗಳನ್ನು ಹೇಳುತ್ತದೆ.” ಎಂದು ಅಭಿಪ್ರಾಯಪಟ್ಟರು.

ಪಾರ್ಲ್ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಅವರು ಮಾತನಾಡಿ, “ಅಭಿಮಾನಿಗಳು ನಿಜವಾಗಿಯೂ ತಮ್ಮದೇ ಎಂದು ಕರೆಯಬಹುದಾದ ಲೀಗ್ ಆಗಿ ಎಸ್‌ಎ20 ಮಾರ್ಪಟ್ಟಿದೆ. ನೀವು ಕೇಪ್ ಟೌನ್, ಜೋಹಾನ್ಸ್‌ಬರ್ಗ್ ಅಥವಾ ಮುಂಬೈನಲ್ಲಿದ್ದರೂ, ಜನರು ತಮ್ಮ ತಂಡಗಳಿಗೆ ಹುರಿದುಂಬಿಸುವುದನ್ನು, ಆಟದ ಮುಖ್ಯಾಂಶಗಳನ್ನು ಪರಸ್ಪರ ಹಂಚಿಕೊಳ್ಳುವುದನ್ನು ಮತ್ತು ಆಟಗಾರರ ಜೊತೆಗೆ ಗುರುತಿಸಿಕೊಳ್ಳುವುದನ್ನು ನೀವು ನೋಡಬಹುದು. ಅಭಿಮಾನಿಗಳ ಜೊತೆಗಿನ ಈ ಸಂಪರ್ಕವು ಲೀಗ್‌ನ ಅತಿದೊಡ್ಡ ಗೆಲುವಾಗಿದೆ. ಕ್ರಿಕೆಟ್ ದೇಶ-ದೇಶಗಳ ನಡುವೆ ನಿಜವಾದ ಸಂಭ್ರಮಾಚರಣೆಯನ್ನಾಗಿ ಮಾಡುತ್ತದೆ.” ಎಂದು ಹೇಳಿದರು.

ಡರ್ಬನ್‌ನ ಸೂಪರ್ ಜೈಂಟ್ಸ್‌ನ ಕ್ರಿಕೆಟ್‌ನ ಜಾಗತಿಕ ನಿರ್ದೇಶಕ ಟಾಮ್ ಮೂಡಿ ಅವರು ಪ್ರತಿಕ್ರಿಯಿಸಿ, “ಎಸ್‌ಎ20 ನಿಜವಾಗಿಯೂ ಆಟಗಾರರು, ಅಭಿಮಾನಿಗಳು ಮತ್ತು ಫ್ರಾಂಚೈಸಿಗಳನ್ನು ಗಡಿಗಳನ್ನು ಮೀರಿ ಸಂಪರ್ಕಿಸುವ ಲೀಗ್ ಆಗಿ ಬೆಳೆದಿದೆ. ಪ್ರತಿ ಋತುವಿನಲ್ಲಿ, ಕ್ರಿಕೆಟ್‌ ಪಂದ್ಯಗಳ ಗುಣಮಟ್ಟವು ಏರುತ್ತಲೇ ಇದೆ. ಜೊತೆಗೆ ಕ್ರಿಕೆಟ್‌ಗೆ ಸಂಬಂಧಿಸಿದ ಉತ್ಸಾಹವೂ ಸಹ ಹೆಚ್ಚುತ್ತಿದೆ. ದಕ್ಷಿಣ ಆಫ್ರಿಕಾದ ಸ್ಥಳೀಯ ಉತ್ಸಾಹವನ್ನು ಜಾಗತಿಕ ಕ್ರಿಕೆಟ್ ಸಮುದಾಯದ ಜೊತೆಗೆ ಒಟ್ಟುಗೂಡಿಸುವ ಸಾಮರ್ಥ್ಯವು ಎಸ್‌ಎ20-ಗೆ ವಿಶೇಷತೆ ತಂದುಕೊಟ್ಟಿದೆ. ಭಾರತದಿಂದ ಹೆಚ್ಚುತ್ತಿರುವ ಬೆಂಬಲವು ಆ ಯಶೋಗಾಥೆಗೆ ಇನ್ನಷ್ಟು ಶಕ್ತಿಯನ್ನು ಸೇರಿಸುತ್ತಿದೆʼ ಎಂದು ಹೇಳಿದರು.

ಎಂಐ ಕೇಪ್‌ಟೌನ್‌ ತರಬೇತುದಾರ ಹಾಶಿಂ ಆಮ್ಲ ಅವರು ಮಾತನಾಡಿ, ʼಉತ್ಸಾಹ ಮತ್ತು ಅಭಿಮಾನಿಗಳ ಬೆಂಬಲದ ಆಚೆಗೆ, ಎಸ್‌ಎ20 ಯುವ ಆಟಗಾರರು ಕಲಿಯಲು, ಹೊಂದಿಕೊಳ್ಳಲು ಮತ್ತು ಉನ್ನತ ಮಟ್ಟದಲ್ಲಿ ಸ್ಪರ್ಧಿಸಲು ಮಾರ್ಗಗಳನ್ನು ಸೃಷ್ಟಿಸುತ್ತಿದೆ. ಈ ವೇದಿಕೆ ಒದಗಿಸುವ ಕ್ರಿಕೆಟ್‌ನ ಗುಣಮಟ್ಟ ಮತ್ತು ಮಾನ್ಯತೆ ಅದ್ಭುತವಾಗಿದೆ. ಮುಂದಿನ ಪೀಳಿಗೆಯ ದಕ್ಷಿಣ ಆಫ್ರಿಕಾದ ಪ್ರತಿಭೆಗಳನ್ನು ಅದು ಹೇಗೆ ರೂಪಿಸುತ್ತಿದೆ ಎಂಬುದನ್ನು ನೀವು ಈಗಾಗಲೇ ನೋಡಬಹುದು. ಲೀಗ್ ನಿಜವಾಗಿಯೂ ತಳಮಟ್ಟದ ಸಾಮರ್ಥ್ಯ ಮತ್ತು ಜಾಗತಿಕ ತಾರಾಪಟ್ಟದ ನಡುವಿನ ಸೇತುವೆಯಾಗಿದೆ ” ಎಂದು ವಿಶ್ಲೇಷಿಸಿದರು.

ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ತಾರೆ ಮಾರ್ಕ್ ಬೌಷರ್ ಅವರು ಪ್ರತಿಕ್ರಿಯಿಸಿ, “ಭಾರತ ಮತ್ತು ದಕ್ಷಿಣ ಆಫ್ರಿಕಾದ ಕ್ರಿಕೆಟ್ ಯಾವಾಗಲೂ ವಿಶೇಷ ಬಾಂಧವ್ಯ ಹಂಚಿಕೊಂಡಿವೆ. ಗೌರವ, ಪೈಪೋಟಿ ಮತ್ತು ಆಟದ ಬಗ್ಗೆ ಆಳವಾದ ಪ್ರೀತಿಯ ಚೈತನ್ಯವನ್ನು ಎಸ್‌ಎ20 ಮುಂದಕ್ಕೆ ಕೊಂಡೊಯ್ಯುತ್ತಿದೆ. ನಿಜವಾಗಿಯೂ ವಿಶೇಷವಾದುದನ್ನು ರೂಪಿಸಲು ಎರಡೂ ಸಂಸ್ಕೃತಿಗಳನ್ನು ಒಂದುಗೂಡಿಸುತ್ತಿದೆʼ ಎಂದು ಹೇಳಿದರು.

'ಎಸ್‌ಎ20 ಇಂಡಿಯಾ ಡೇ 2025'- ಸಮಾರಂಭದಲ್ಲಿ ಜಿಯೋಸ್ಟಾರ್ ಆವೃತ್ತಿ 4ರ ತನ್ನ ಪ್ರಚಾರವನ್ನು ಅನಾವರಣಗೊಳಿಸಿತು. ಇದು ಎಸ್‌ಎ20-ರ ಕ್ರಿಯಾಶೀಲ ಆಟದ ಉತ್ಸಾಹ ಮತ್ತು ಅಭಿಮಾನಿಗಳ ಸಂಭ್ರಮಾಚರಿಸುವುದನ್ನು ಸೆರೆಹಿಡಿಯುವ ಶಕ್ತಿಶಾಲಿ ದೃಶ್ಯವಾಗಿದ್ದು, ಹೊಸ ಆವೃತ್ತಿಗೆ ಚೈತನ್ಯ ನೀಡಲಿದೆ. ಇದರ ಜೊತೆಗೆ, ಮಾಹಿತಿ ಒದಗಿಸುವವರು ಮತ್ತು ವಿಶೇಷ ಅಭಿಮಾನಿಗಳು ಭಾರತದಲ್ಲಿ ಲೀಗ್‌ನ ಸಂಭ್ರಮಾಚರಣೆಯಲ್ಲಿ ಸಮಯ ಕಳೆದರು. ಪ್ರತಿಯೊಬ್ಬರೂ ಎಸ್‌ಎ20-ನ ನೆನಪಿನ ವಿಶೇಷ ಕಾಣಿಕೆಗಳೊಂದಿಗೆ ಹೊರನಡೆದರು.

4ನೇ ಆವೃತ್ತಿಯು ಹತ್ತಿರದಲ್ಲಿ ಇರುವಾಗ ʼಎಸ್‌ಎ20ʼ ಭಾರತದ ಜೊತೆಗಿನ ತನ್ನ ಸಂಪರ್ಕವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಜ್ಜಾಗಿದೆ. ತನ್ನ ಫ್ರಾಂಚೈಸಿಗಳು, ಪ್ರಸಾರಕರು, ಪಾಲುದಾರರ ಬೆಂಬಲದೊಂದಿಗೆ, ಲೀಗ್ ಅನ್ನು ಇನ್ನಷ್ಟು ಆಕರ್ಷಕ, ರೋಮಾಂಚಕಾರಿ ಮತ್ತು ಅದ್ಭುತವಾಗಿಸಲು ಬದ್ಧವಾಗಿದೆ. ಉತ್ತಮ ಗುಣಮಟ್ಟದ ಕ್ರಿಕೆಟ್ ಮತ್ತು ಸರಿಸಾಟಿಯಿಲ್ಲದ ಮನರಂಜನೆ ಒದಗಿಸಲಿದೆ.

ಡಿಸೆಂಬರ್ 26 ರಿಂದ 2026ರ ಜನವರಿ 25ರವರೆಗೆ ನಡೆಯಲಿರುವ ಎಸ್‌ಎ20 4ನೆ ಆವೃತ್ತಿಯ ಎಲ್ಲಾ ಪಂದ್ಯಗಳು ಭಾರತದಲ್ಲಿ ಜಿಯೊಹಾಟ್‌ಸ್ಟಾರ್‌ (JioHotstar) ಮತ್ತು ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ (Star Sports Network) ನೇರಪ್ರಸಾರ ಕಾಣಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net