

ದುಬೈ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ (ಆ.31) ನಡೆದ ಏಷ್ಯಾಕಪ್- 2022 ನಲ್ಲಿ ಭಾರತವು ಹಾಂಗ್ಕಾಂಗ್ ಎದುರು 40 ರನ್ಗಳ ಗೆಲುವು ಕಂಡಿದೆ. ಈ ಮೂಲಕ ಟೀಮ್ ಇಂಡಿಯಾ ಏಷ್ಯಾ ಕಪ್- 2022 ಟೂರ್ನಿಯ 'ಎ' ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಸೂಪರ್-4 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.
ಕೇವಲ 22 ಎಸೆತಗಳಲ್ಲಿ 50 ರನ್ ಗಳಿಸಿದ ಸೂರ್ಯಕುಮಾರ್, ಒಟ್ಟು 26 ಎಸೆತಗಳಲ್ಲಿ ತಲಾ 6 ಫೋರ್ ಮತ್ತು ಸಿಕ್ಸರ್‌ಗಳೊಂದಿಗೆ ಅಜೇಯ 68 ರನ್ ಗಳಿಸಿದರು. ಐದು ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಬಾರಿಸುವ ಮೂಲಕ ನೂತನ ದಾಖಲೆ ಕೂಡ ಮಾಡಿದ್ದಾರೆ. ಜತೆಗೆ ಭಾರತದ ನಾಯಕ ರೋಹಿತ್ ಶರ್ಮಾ ದಾಖಲೆಯನ್ನು ಸರಿಗಟ್ಟಿದ್ದಾರೆ. ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ವೇಗವಾಗಿ ಅರ್ಧಶತಕ ಗಳಿಸಿದ ಭಾರತದ ಒಂಬತ್ತನೆ ಬ್ಯಾಟರ್ ಇವರಾಗಿದ್ದಾರೆ.
ಇನ್ನೊಂದೆಡೆ, ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 1 ಫೋರ್ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 59 ರನ್ ಗಳಿಸಿದರು. ಪರಿಣಾಮ ಭಾರತ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೂಡಲೇ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ 13 ಎಸೆತಗಳಲ್ಲಿ 21 ರನ್ ಬಾರಿಸುವಲ್ಲಷ್ಟೇ ಸಫಲರಾದರು. ಆದರೆ ಕೆ.ಎಲ್ ರಾಹುಲ್ ಆಮೆಗತಿಯ ಬ್ಯಾಟಿಂಗ್‌ನಿಂದಾಗಿ ಭಾರತ ರನ್ ಗಳಿಸಲು ಪರದಾಡಿತು. ರಾಹುಲ್ 39 ಎಸೆಗಳಲ್ಲಿ 2 ಸಿಕ್ಸರ್ ಸಿಡಿಸಿ 36 ರನ್ ಗಳಿಸಿ ಔಟಾದರು. ನಂತರ ಸೂರ್ಯಕುಮಾರ್ ಹಾಗೂ ವಿರಾಟ್ ಕೊಹ್ಲಿ ಅವರ ಬಿರುಸಿನ ಆಟದಿಂದ ಭಾರತ ಗೆಲುವು ಸಾಧಿಸಿತು. (ಏಜೆನ್ಸೀಸ್)
ಇಲ್ಲಿದೆ ನೋಡಿ ವಿಡಿಯೋ: