

ಕೋಲ್ಕತ: ಎದೆನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರ ಈ ಸ್ಥಿತಿಗೆ ಕಾರಣ, ಅವರ ಮೇಲಿರುವ ರಾಜಕೀಯ ಒತ್ತಡ ಎಂದು ಮಾಜಿ ಸಚಿವ ಹಾಗೂ ಸಿಪಿಐ(ಎಂ) ಹಿರಿಯ ಮುಖಂಡ ಅಶೋಕ್ ಭಟ್ಟಾಚಾರ್ಯ ಹೇಳಿದ್ದಾರೆ. ಇವರು ಸೌರವ್ ಗಂಗೂಲಿ ಕುಟುಂಬದ ಸ್ನೇಹಿತರೂ ಆಗಿದ್ದಾರೆ.
ಗಂಗೂಲಿ ಮೇಲೆ ರಾಜಕೀಯ ಸೇರುವ ಒತ್ತಡ ಹೇರಲಾಗಿತ್ತು. ಕೆಲವರು ಗಂಗೂಲಿ ಅವರನ್ನು ರಾಜಕೀಯವಾಗಿ ಬಳಸಬೇಕೆಂದು ಬಯಸಿದ್ದರು. ಅದು ಅವರ ಮೇಲೆ ಒತ್ತಡ ಹೇರಿದೆ ಎಂದು ಭಟ್ಟಾಚಾರ್ಯ ಹೇಳಿದ್ದಾರೆ. ಗಂಗೂಲಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಬಳಿಕ ಭಟ್ಟಾಚಾರ್ಯ ಈ ವಿಷಯ ಪ್ರಸ್ತಾಪ ಮಾಡಿದ್ದಾರೆ.
ಶನಿವಾರದಂದು ಲಘು ಹೃದಯಾಘಾತಕ್ಕೊಳಗಾಗಿ ಕೋಲ್ಕತ್ತದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಗೂಲಿಯವರು ಸದ್ಯ ಆಯಂಜಿಯೊಪ್ಲಾಸ್ಟಿಗೆ ಒಳಗಾಗಿದ್ದಾರೆ. ಇವರ ಈ ಅನಾರೋಗ್ಯದ ಸ್ಥಿತಿಯ ಕುರಿತು ಭಟ್ಟಾಚಾರ್ಯ ಅವರು ನೀಡಿರುವ ಈ ಹೇಳಿಕೆ ಸದ್ಯ ಪಶ್ಚಿಮ ಬಂಗಾಳದಲ್ಲಿ ಕೋಲಾಹಲ ಸೃಷ್ಟಿಮಾಡಿದೆ.
ಸೌರವ್ ಗಂಗೂಲಿ ಅವರು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೆ ಈ ಕುರಿತು ಅವರು ಮಾತ್ರ ಎಲ್ಲಿಯೂ ಮಾತನಾಡಿರಲಿಲ್ಲ. ಈ ಬಗ್ಗೆ ಪ್ರಸ್ತಾಪಿಸಿರುವ ಭಟ್ಟಾಚಾರ್ಯ ಅವರು, ರಾಜಕೀಯಕ್ಕೆ ಸೇರಲು ನಾವು ಅವರ ಮೇಲೆ ಒತ್ತಡವನ್ನು ಹೇರಬಾರದು. ಕಳೆದ ವಾರ ಸೌರವ್ ಗಂಗೂಲಿ ಅವರಲ್ಲಿ ನಾನು ರಾಜಕೀಯಕ್ಕೆ ಸೇರಬಾರದು ಎಂದು ಹೇಳಿದ್ದೆ. ಅವರದನ್ನು ವಿರೋಧಿಸಲಿಲ್ಲ ಎಂದು ಮಾಹಿತಿ ನೀಡಿದರು.
ಸೌರವ್ ರಾಜಕೀಯದವರು ಅಲ್ಲ, ಅವರು ಕ್ರೀಡಾ ಐಕಾನ್ ಆಗಿಯೇ ಗುರುತಿಸಬೇಕು ಎಂದರು. ಈ ಮಾತಿಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ಕೆಲವರು ಕೆಟ್ಟ ಮನಸ್ಥಿತಿಯಿಂದಾಗಿ ಎಲ್ಲದರಲ್ಲೂ ರಾಜಕೀಯವನ್ನು ಹುಡುಕುತ್ತಾರೆ ಎಂದು ಕಿಡಿ ಕಾರಿದರು.
ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸಚಿವ ಶೋಭನ್‌ದೇಬ್ ಚಟರ್ಜಿ ಸಹ ಗಂಗೂಲಿ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸುವ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.