

ರಾಜ್‌ಕೋಟ್: ಭರವಸೆ ಬ್ಯಾಟರ್ ಆಗಿ ಹೊರಹೊಮ್ಮುತ್ತಿರುವ ಮಹಾರಾಷ್ಟ್ರದ ಋತುರಾಜ್ ಗಾಯಕ್ವಾಡ್ ಟೂರ್ನಿಯಲ್ಲಿ 4ನೇ ಶತಕ ಸಿಡಿಸಿದರು. ವಿಜಯ್ ಹಜಾರೆ ಟ್ರೋಫಿ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಶತಕ (4) ಸಿಡಿಸಿದ 4ನೇ ಬ್ಯಾಟರ್ ಎನಿಸಿಕೊಂಡರು. ವಿರಾಟ್ ಕೊಹ್ಲಿ, ದೇವದತ್ ಪಡಿಕಲ್, ಪೃಥ್ವಿ ಷಾ ಈ ಹಿಂದಿನ ಸಾಧಕರು. ಮಂಗಳವಾರ ಚಂಡೀಗಢ ವಿರುದ್ಧದ ಹಣಾಹಣಿಯಲ್ಲಿ ಋತುರಾಜ್ (168 ರನ್, 132 ಎಸೆತ, 12 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮಹಾರಾಷ್ಟ್ರ ತಂಡ ಚಂಡೀಗಢ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿತು.
ಋತುರಾಜ್ ಅದ್ಭುತ ನಿರ್ವಹಣೆ ನಡುವೆಯೂ ರನ್‌ರೇಟ್ ಲೆಕ್ಕಾಚಾರದಲ್ಲಿ ಹಿಂದೆ ಉಳಿದ ಮಹಾರಾಷ್ಟ್ರ ತಂಡ ಕೂದಲೆಳೆ ಅಂತರದಲ್ಲಿ ನಾಕೌಟ್ ಹಂತಕ್ಕೇರಲು ವಿಫಲವಾಯಿತು. ಇದರಿಂದ ಋತುರಾಜ್ ಅವರ ಶತಕದ ಅಭಿಯಾನಕ್ಕೂ ಬ್ರೇಕ್ ಬಿದ್ದಿತು. ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಋತುರಾಜ್ ಒಟ್ಟು 603 ರನ್ ಬಾರಿಸಿದರು.
ನಾಲ್ಕು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ತನ್ನ 5ನೇ ಹಾಗೂ ಕಡೇ ಪಂದ್ಯದಲ್ಲಿ ಬಂಗಾಳ ಎದುರು ಸೋಲನುಭವಿಸಿದರೂ ನಾಕೌಟ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗ ಬಂಗಾಳ ತಂಡಕ್ಕೆ 4 ವಿಕೆಟ್‌ಗಳಿಂದ ಶರಣಾಯಿತು. ಈ ಸೋಲಿನೊಂದಿಗೆ ಕರ್ನಾಟಕ ತಂಡ ಎಲೈಟ್ ಬಿ ಗುಂಪಿನಿಂದ ಅಗ್ರಸ್ಥಾನಿಯಾಗಿ ನೇರ ಕ್ವಾರ್ಟರ್ ಫೈನಲ್ ಪ್ರವೇಶಿಸಲು ವಿಫಲವಾಯಿತು.