ರಂಗೇರಿದ ತಮಿಳುನಾಡು ಕ್ರಿಕೆಟ್ ರಾಜಕೀಯ; ರೂಪಾ ಪದತ್ಯಾಗ, ಚುಕ್ಕಾಣಿಯತ್ತ ಸ್ಟಾಲಿನ್ ಪುತ್ರ!

rupa tnca web
Published on

ಚೆನ್ನೈ: ಭಾರತದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯೊಂದರ ಮುಖ್ಯಸ್ಥರಾದ ಮೊದಲ ಮಹಿಳೆ ಎನಿಸಿದ್ದ ರೂಪಾ ಗುರುನಾಥ್ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷೆ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಐಸಿಸಿ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಪುತ್ರಿಯಾಗಿರುವ ರೂಪಾ, ‘ಉದ್ಯಮ ಮತ್ತು ವೈಯಕ್ತಿಕ ಸಂಗತಿಗಳತ್ತ ಗಮನಹರಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಅವರು 2019ರ ಸೆಪ್ಟೆಂಬರ್‌ನಲ್ಲಿ ಹುದ್ದೆ ಅಲಂಕರಿಸಿದ್ದರು.

ಇಂಡಿಯಾ ಸಿಮೆಂಟ್ಸ್ ಕಂಪನಿಯ ನಿರ್ದೇಶಕಿಯೂ ಆಗಿರುವ 47 ವರ್ಷದ ರೂಪಾ ವಿರುದ್ಧ ಈ ಮುನ್ನ ಸ್ವಹಿತಾಸಕ್ತಿ ಸಂಘರ್ಷದ ಆರೋಪವೂ ಕೇಳಿಬಂದಿತ್ತು. ಐಪಿಎಲ್ ತಂಡ ಚೆನ್ನೈ ಸೂಪರ್‌ಕಿಂಗ್ಸ್‌ನಲ್ಲಿ ಇಂಡಿಯಾ ಸಿಮೆಂಟ್ಸ್ ಕಂಪನಿ ಹೆಚ್ಚಿನ ಪಾಲು ಹೊಂದಿರುವುದು ಇದಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಅವರ ವಿರುದ್ಧ ತೀರ್ಪು ಬರುವ ನಿರೀಕ್ಷೆಯೂ ಇತ್ತು. ಆದರೆ ರಾಜೀನಾಮೆಗೆ ಇದು ಕಾರಣವಲ್ಲ ಎಂದು ಟಿಎನ್‌ಸಿಎ ಅಧಿಕಾರಿಗಳು ಹೇಳಿದ್ದಾರೆ. ರೂಪಾ 2013ರ ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಆಜೀವ ನಿಷೇಧಕ್ಕೆ ಒಳಗಾಗಿರುವ ಗುರುನಾಥ್ ಮೇಯಪ್ಪನ್ ಅವರ ಪತ್ನಿಯೂ ಆಗಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಇದೀಗ ಟಿಎನ್‌ಸಿಎ ಚುಕ್ಕಾಣಿ ಹಿಡಿಯುವತ್ತ ಗಮನಹರಿಸಿದ್ದಾರೆ ಎಂದೂ ಹೇಳಲಾಗಿದೆ. ಉದಯನಿಧಿ ಅವರನ್ನು ಶ್ರೀನಿವಾಸನ್ ಬಣ ಬೆಂಬಲಿಸುವುದೇ ಎಂಬುದು ಕುತೂಹಲಕಾರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net