

Akash Deep : ತಮ್ಮ ಕನಸಿನ ಎಸ್ಯುವಿ ಕಾರನ್ನು ಖರೀದಿ ಮಾಡಿದ ಖುಷಿಯಲ್ಲಿರುವ ಟೀಮ್ ಇಂಡಿಯಾ ಸ್ಟಾರ್ ವೇಗಿ ಆಕಾಶ್ ದೀಪ್‌ಗೆ ಉತ್ತರ ಪ್ರದೇಶದ ಲಖನೌ ಪ್ರಾದೇಶಿಕ ಸಾರಿಗೆ ಕಚೇರಿ ಶಾಕ್ ನೀಡಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಹಾಗೂ ಕಡ್ಡಾಯವಾಗಿರುವ ಹೆಚ್ಚಿನ ಭದ್ರತಾ ನೋಂದಣಿ ಫಲಕ (HSRP) ಮತ್ತು ಮೂರನೇ ನೋಂದಣಿ ಗುರುತು (TRM) ಅಳವಡಿಕೆ ಪೂರ್ಣವಾಗುವವರೆಗೆ ಸಾರ್ವಜನಿಕ ರಸ್ತೆಗಳಲ್ಲಿ ಕಾರು ಚಾಲನೆ ಮಾಡದಂತೆ ಸೋಮವಾರ (ಆಗಸ್ಟ್ 11) ನೋಟಿಸ್ ನೀಡಲಾಗಿದೆ.
ಅಧಿಕೃತ ದಾಖಲೆಗಳ ಪ್ರಕಾರ ಎಸ್ಯುವಿ ಕಾರನ್ನು 2025, ಆಗಸ್ಟ್ 7ರಂದು ಮಾರಾಟ ಮಾಡಲಾಯಿತು. ಆಗಸ್ಟ್ 8ಕ್ಕೆ ಇನ್ಸುರೆನ್ಸ್ ಆಗಿದ್ದು, ಆಗಸ್ಟ್ 9ಕ್ಕೆ ಫ್ಯಾನ್ಸಿ ನೋಂದಣಿ ಸಂಖ್ಯೆ (UP32 QW 0041) ಯನ್ನು ಹಂಚಿಕೆ ಮಾಡಲಾಗಿದೆ. ಆದರೂ, ಕಾರಿನ ಟಿಆರ್/ಆರ್ಸಿ ನೋಂದಣಿ ಪ್ರಕ್ರಿಯೆ ವಾಹನ ಪೋರ್ಟಲ್‌ನಲ್ಲಿ ಅಪೂರ್ಣಗೊಂಡಿರುವುದನ್ನು ಹಾಗೂ ಅಗತ್ಯವಾದ ಎಚ್ಎಸ್ಆರ್ಪಿ ಮತ್ತು ಟಿಆರ್ಎಮ್ ಅನ್ನು ವಾಹನಕ್ಕೆ ಅಳವಡಿಸದೇ ಇರುವುದನ್ನು ಪ್ರಾದೇಶಿಕ ಸಾರಿಗೆ ಇಲಾಖೆ ಗಮನಿಸಿದೆ. ಇದು 1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 39 ಮತ್ತು 41(6) ಮತ್ತು 1989ರ ಕೇಂದ್ರ ಮೋಟಾರು ವಾಹನ ನಿಯಮಗಳ ನಿಯಮ 50 ರ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಆಕಾಶ್ ದೀಪ್ ಅವರಿಗೆ ನೋಟಿಸ್ ನೀಡಲಾಗಿದೆ.
ವಾಹನವನ್ನು ಅದರ ಪ್ರಸ್ತುತ ಸ್ಥಿತಿಯಲ್ಲಿ ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 192 ರ ಅಡಿಯಲ್ಲಿ ಅಪರಾಧವಾಗಿದೆ ಮತ್ತು ಸೆಕ್ಷನ್ 207 ರ ಅಡಿಯಲ್ಲಿ ವಾಹನವನ್ನು ವಶಪಡಿಸಿಕೊಳ್ಳಲು ಅಥವಾ ಬಂಧಿಸಲು ಅಧಿಕಾರಿಗಳಿಗೆ ಅಧಿಕಾರವಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಅಲ್ಲದೆ, ನೋಂದಣಿ ಮಾಡಿರುವುದಕ್ಕೆ ಪುರಾವೆ, ವಿಮೆ, ತೆರಿಗೆ ಪಾವತಿ ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳೊಂದಿಗೆ ವೈಯಕ್ತಿಕವಾಗಿ ಅಥವಾ ಅಧಿಕೃತ ಪ್ರತಿನಿಧಿಯ ಮೂಲಕ ಹಾಜರಾಗಲು ಆರ್‌ಟಿಒ ಆಕಾಶ್ ದೀಪ್‌ಗೆ 72 ಗಂಟೆಗಳ ಕಾಲಾವಕಾಶ ನೀಡಿದೆ.
HSRP ಮತ್ತು ಮೂರನೇ ನೋಂದಣಿ ಗುರುತು (TRM) ಇಲ್ಲದೆ ಆಕಾಶ್ ದೀಪ್‌ಗೆ ವಾಹನವನ್ನು ತಲುಪಿಸಿದ ಚಿನ್ಹಾಟ್ ಮೂಲದ ಆಟೋಮೊಬೈಲ್ ಡೀಲರ್‌ಶಿಪ್‌ಗೆ ಆರ್‌ಟಿಒ ಶೋಕಾಸ್ ನೋಟಿಸ್ ನೀಡಿದೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 192 ಮತ್ತು 207 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ನೀಡಿದ ನೋಟಿಸ್ನಲ್ಲಿ ಡೀಲರ್‌ಶಿಪ್‌ಗೆ ಎಚ್ಚರಿಕೆ ನೀಡಲಾಗಿದೆ.
ಅಂದಹಾಗೆ, ಆರ್‌ಟಿಒ ಎಲ್ಲ ಡೀಲರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು, ತಾತ್ಕಾಲಿಕ ಅಥವಾ ಶಾಶ್ವತ ನೋಂದಣಿಗಾಗಿ ಯಾವುದೇ ವಾಹನವನ್ನು HSRP ಮತ್ತು TRM ಇಲ್ಲದೆ ಹಸ್ತಾಂತರಿಸಬಾರದು ಎಂದು ಆರ್‌ಟಿಒ ಹೇಳಿದೆ. ಡೀಲರ್‌ಗಳು ಫಾರ್ಮ್ 20, 21 ಮತ್ತು 22 ಅವಶ್ಯಕತೆಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದಿದೆ. ಅಲ್ಲದೆ, ಕಾರು ವಿತರಣೆಯ ಮೊದಲು ವಾಹನ್ ಪೋರ್ಟಲ್‌ನಲ್ಲಿ ದಾಖಲೆಗಳನ್ನು ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. (ಏಜೆನ್ಸೀಸ್)