ರಾಜಸ್ಥಾನ ವಿರುದ್ಧ ಹೀನಾಯ ಸೋಲು... ಅಂಬಾಟಿ ರಾಯಡು ನೆನಪಿಸಿಕೊಂಡ ರುತುರಾಜ್​! Ruturaj Gaikwad

Ruturaj Gaikwad
Published on

Ruturaj Gaikwad : ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ಸತತ ಎರಡನೇ ಪಂದ್ಯದಲ್ಲಿ ಸೋತಿದೆ. ಭಾನುವಾರ (ಮಾರ್ಚ್​ 30) ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 6 ರನ್‌ಗಳ ಅಂತರದಿಂದ ಸೋಲುಂಡಿತು. ಆರಂಭಿಕರ ವೈಫಲ್ಯ ಹಾಗೂ ಫೀಲ್ಡಿಂಗ್ ದೋಷಗಳು ತಮ್ಮ ಗೆಲುವಿನ ಸಾಧ್ಯತೆಯನ್ನು ಕುಂಠಿತಗೊಳಿಸಿವೆ ಎಂದು ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಹೇಳಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿತು. ನಿತೀಶ್ ರಾಣಾ (81 ರನ್​ 36 ಎಸೆತ, 10 ಬೌಂಡರಿ, 5 ಸಿಕ್ಸರ್) ಆರ್‌ಆರ್ ಪರ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ನಾಯಕ ರಿಯಾನ್ ಪರಾಗ್ (37 ರನ್​ 28 ಎಸೆತ, 2 ಬೌಂಡರಿ, 2 ಸಿಕ್ಸರ್) ಕೂಡ ಉತ್ತಮ ರನ್​ ಕಾಣಿಕೆ ನೀಡಿದರು. ಇದಾದ ನಂತರ, ಗುರಿ ಬೆನ್ನತ್ತಿದ ಸಿಎಸ್​ಕೆ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 176 ರನ್‌ಗಳಿಗೆ ಸೀಮಿತವಾಯಿತು. ಚೆನ್ನೈ ಬ್ಯಾಟ್ಸ್‌ಮನ್‌ಗಳ ಪರ ರುತುರಾಜ್ ಗಾಯಕ್ವಾಡ್ ( 63 ರನ್​, 44 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕದೊಂದಿಗೆ ಮಿಂಚಿದರು.

ಪಂದ್ಯದ ನಂತರ, ಸಿಎಸ್‌ಕೆ ನಾಯಕ ರುತುರಾಜ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದರು. ಪಂದ್ಯದಲ್ಲಿ ಪವರ್ ಪ್ಲೇ ಬಹಳ ಮುಖ್ಯ ಎಂದರು. ಆರ್‌ಆರ್ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಚೆನ್ನಾಗಿ ಬ್ಯಾಟಿಂಗ್ ಮಾಡಿದರು ಮತ್ತು ನಾವು ಅವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಫೀಲ್ಡಿಂಗ್ ತಪ್ಪುಗಳಿಂದಾಗಿ, ನಾವು ಎದುರಾಳಿಗೆ 8 ರಿಂದ 10 ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದೇವೆ. ಫೀಲ್ಡಿಂಗ್ ವಿಷಯದಲ್ಲಿ ಸಾಕಷ್ಟು ಸುಧಾರಣೆ ಮಾಡಬೇಕಾಗಿದೆ ಎಂದು ರುತುರಾಜ್​ ಹೇಳಿದರು.

ಈ ಪಿಚ್​ನಲ್ಲಿ 180 ರನ್​ಗಳ ಗುರಿಯನ್ನು ಸಾಧಿಸಬಹುದಿತ್ತು. ಈ ಪಿಚ್ ಬ್ಯಾಟಿಂಗ್​ಗೆ ಸಹಕರಿಸುತ್ತದೆ. 210 ರನ್​ಗಳತ್ತ ಸಾಗುತ್ತಿದ್ದ ಆರ್​ಆರ್ ಅನ್ನು ನಿರ್ಬಂಧಿಸಿದ್ದು ಸಂತೋಷ ತಂದಿದೆ. ಈ ಹಿಂದೆ, ಅಜಿಂಕ್ಯಾ ರಹಾನೆ ಮತ್ತು ಅಂಬಟಿ ರಾಯುಡು ಮಧ್ಯಮ ಕ್ರಮಾಂಕದ ಜವಾಬ್ದಾರಿಗಳನ್ನು ಹೊತ್ತುಕೊಂಡು ಉತ್ತಮವಾಗಿ ಆಡುತ್ತಿದ್ದರು. ರಹಾನೆ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದಾಗ, ರಾಯುಡು ಮಧ್ಯಮ ಓವರ್‌ಗಳಲ್ಲಿ ಆಡುತ್ತಿದ್ದರು. ಈಗ ಅವರಿಬ್ಬರೂ ಇಲ್ಲ ಎನ್ನುವ ಮೂಲಕ ಅಂತಹ ಆಟಗಾರರ ಅವಶ್ಯಕತೆ ತಂಡಕ್ಕೆ ಇದೆ ಎಂದು ರುತುರಾಜ್​ ಪರೋಕ್ಷವಾಗಿ ಹೇಳಿದರು.

ಆರಂಭಿಕರು ಉತ್ತಮವಾಗಿ ಆಡಿದ್ದರೆ ಮತ್ತು ಉತ್ತಮ ಆರಂಭವನ್ನು ನೀಡಿದ್ದರೆ, ಆರ್​ಆರ್​ ಪಂದ್ಯದಲ್ಲಿ ಪರಿಸ್ಥಿತಿ ವಿಭಿನ್ನವಾಗಿರುತ್ತಿತ್ತು. ಈ ಪಂದ್ಯದ ಸೋಲಿನಲ್ಲಿಯೂ ಕೆಲವು ಸಕಾರಾತ್ಮಕ ಅಂಶಗಳಿವೆ. ಎಂದಿನಂತೆ, ನೂರ್ ಅಹ್ಮದ್ ಉತ್ತಮವಾಗಿ ಬೌಲಿಂಗ್ ಮಾಡಿದರು. ಖಲೀಲ್ ಅಹ್ಮದ್ ಮತ್ತು ಜಡೇಜಾ ಕೂಡ ಉತ್ತಮ ಪ್ರದರ್ಶನ ನೀಡಿದರು. ಅವರಿಗೆ ಆವೇಗ ಬೇಕು ಮತ್ತು ನಾವು ಆವೇಗ ಪಡೆದ ನಂತರ, ನಮ್ಮನ್ನು ತಡೆಯುವುದು ತುಂಬಾ ಕಷ್ಟ ಎಂದು ರುತುರಾಜ್ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net