

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಐಪಿಎಲ್ 18ನೇ ಆವೃತ್ತಿಯಲ್ಲಿ ಈಗಾಗಲೆ ಈಡನ್, ಚೆಪಾಕ್, ವಾಂಖೆಡೆ, ಜೈಪುರ ಮತ್ತು ಮುಲ್ಲನ್ಪುರದಲ್ಲಿ ಗೆಲುವಿನ ಧ್ವಜ ನೆಟ್ಟು ಬೀಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ, ತವರಿನಲ್ಲಿ ಇನ್ನೂ ಗೆಲುವು ಕಾಣದ ನೋವು ಕಾಡುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ತನ್ನ 9ನೇ ಲೀಗ್ ಪಂದ್ಯ ಮತ್ತು ತವರಿನ 4ನೇ ಪಂದ್ಯದಲ್ಲಿ ಈ ಕೊರತೆಯನ್ನು ನೀಗಿಸಿಕೊಳ್ಳಲು ರಜತ್ ಪಾಟೀದಾರ್ ಬಳಗ ಹೋರಾಡಲಿದೆ. ಸತತ 4 ಸೋಲಿನೊಂದಿಗೆ ತಿಣುಕಾಡುತ್ತಿರುವ ರಾಜಸ್ಥಾನ ರಾಯಲ್ಸ್ ಎದುರು ತವರಿನಲ್ಲೂ ಗೆಲುವಿನ ಧ್ವಜ ನೆಡುವ ಅಪೂರ್ವ ಅವಕಾಶ ಆರ್ಸಿಬಿ ಮುಂದಿದೆ. ಆದರೆ, ಎದುರಾಳಿ ತಂಡಕ್ಕೆ ಸ್ಥಳಿಯ ದಿಗ್ಗಜ ರಾಹುಲ್ ದ್ರಾವಿಡ್ ಕೋಚ್ ಆಗಿರುವುದರಿಂದ ಆರ್ಸಿಬಿ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಈಗಾಗಲೆ ಕೆಎಲ್ ರಾಹುಲ್ ಆರ್ಸಿಬಿ ಎದುರು ಅಬ್ಬರಿಸಿ "ಇದು ನನ್ನ ಮೈದಾನ' ಎಂದು ಸಾರಿರುವುದರಿಂದ ದ್ರಾವಿಡ್ ಬಳಗದ ಎದುರು ಆರ್ಸಿಬಿಗೆ ಮತ್ತೆ ಸತ್ವಪರೀೆ ಎದುರಾಗುವ ನಿರೀಕ್ಷೆಯೂ ಇದೆ.
ಆರ್ಸಿಬಿ ತವರಿನ ಮೊದಲ 3 ಪಂದ್ಯಗಳಲ್ಲೂ ಪ್ರಮುಖವಾಗಿ ಹಿನ್ನಡೆಯಾಗಿದ್ದು ಟಾಸ್ ಸೋಲು ಮತ್ತು ಬ್ಯಾಟಿಂಗ್ ವಿಭಾಗದ ವೈಫಲ್ಯ. ತವರಿನ ನಾಲ್ಕನೇ ಪಂದ್ಯದಲ್ಲಿ ಇವೆರಡು ಆರ್ಸಿಬಿಗೆ ವರದಾನವಾದರೆ ಗೆಲುವಿನ ಲಯವನ್ನು ತವರಿನಲ್ಲೂ ಮುಂದುವರಿಸುವುದು ಕಷ್ಟವಲ್ಲ. ತವರಿನಾಚೆ ಅಬ್ಬರಿಸುತ್ತಿರುವ ಆರ್ಸಿಬಿ, ಚಿನ್ನಸ್ವಾಮಿ ಸ್ಟೇಡಿಯಂ ಪಿಚ್ ಅನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವುತ್ತ ಬಂದಿದೆ. ನಿಧಾನಗತಿಯ ಪಿಚ್ನಲ್ಲಿ ಸಮಯೋಚಿತ ಆಟವಾಡುವ ಕಲೆಯನ್ನು ಆರ್ಸಿಬಿ ಬ್ಯಾಟರ್ಗಳು ಕರಗತ ಮಾಡಿಕೊಳ್ಳಬೇಕಾಗಿದೆ.
ತವರಿನಾಚೆ ಆರ್ಸಿಬಿ ಬ್ಯಾಟರ್ಗಳು ಪ್ರತಿ ಓವರ್ಗೆ 9-10 ರನ್ ಕಸಿದಿದ್ದಾರೆ. ಆದರೆ ತವರಿನಲ್ಲಿ ಈ ಗಳಿಕೆ 7&8 ರನ್ಗಳಿಗೆ ಕುಸಿದಿದೆ. ವಿರಾಟ್ ಕೊಹ್ಲಿ ಕೂಡ ಬೆಂಗಳೂರಿನ ಮೊದಲ 3 ಪಂದ್ಯಗಳಲ್ಲಿ 22 ರನ್ ಗಳಿಸಿದ್ದೇ ಗರಿಷ್ಠವೆನಿಸಿದೆ. ಜತೆಗೆ ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ತವರಿನ ಮೈದಾನದಲ್ಲಿ ಮಿಂಚಬೇಕಿದೆ. ಫಿಲ್ ಸಾಲ್ಟ್ ಮತ್ತೊಮ್ಮೆ ಪವರ್ಪ್ಲೇನಲ್ಲಿ ಅಬ್ಬರಿಸಬೇಕಿದೆ. ರಜತ್ ಪಾಟೀದಾರ್, ಜಿತೇಶ್ ಶರ್ಮರಿಂದಲೂ ಉಪಯುಕ್ತ ಆಟ ನಿರೀಸಲಾಗುತ್ತಿದೆ. ಕಳೆದ ಪಂದ್ಯದಲ್ಲಿ ಲಿವಿಂಗ್ಸ್ಟೋನ್ ಬದಲಿಗೆ ಅವಕಾಶ ಪಡೆದ ರೊಮಾರಿಯೊ ಶೆರ್ಡ್ ಸ್ಥಾನ ಉಳಿಸಿಕೊಳ್ಳುವ ನಿರೀೆ ಇದೆ. ಸ್ಲಾಗ್ ಓವರ್ಗಳಲ್ಲಿ ಆರ್ಸಿಬಿಗೆ ಟಿಮ್ ಡೇವಿಡ್ ಬಲವಿದೆ. ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಗೆದ್ದ ವಿಶ್ವಾಸವೂ ಆರ್ಸಿಬಿ ತಂಡಕ್ಕಿದೆ.
ಒತ್ತಡದಲ್ಲಿ ರಾಜಸ್ಥಾನ
ನಾಯಕ ಸಂಜು ಸ್ಯಾಮ್ಸನ್ ಗಾಯದಿಂದಾಗಿ ಈ ಪಂದ್ಯವನ್ನೂ ತಪ್ಪಿಸಿಕೊಳ್ಳಲಿದ್ದು, ಮತ್ತೊಮ್ಮೆ ರಿಯಾನ್ ಪರಾಗ್ ಹಂಗಾಮಿ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸತತ 4 ಸೋಲಿನ ಸರಪಳಿ ಮುರಿಯುವ ಮೂಲಕ ಪ್ಲೇಆ್ ಆಸೆ ಜೀವಂತವಿಡಲು ಆರ್ಆರ್ಗೆ ಗೆಲುವಿನ ಅಗತ್ಯವಿದೆ. ಯಶಸ್ವಿ ಜೈಸ್ವಾಲ್, ನಿತೀಶ್ ರಾನಾ, ಶಿಮ್ರೊನ್ ಹೆಟ್ಮೆಯರ್ ಇತ್ತೀಚೆಗೆ ಲಯಕ್ಕೆ ಮರಳಿದ್ದಾರೆ. ಪದಾರ್ಪಣೆ ಪಂದ್ಯದಲ್ಲೇ ಗಮನಸೆಳೆದಿರುವ 14 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ ತಂಡಕ್ಕೆ ಹೊಸ ಹುರುಪು ತುಂಬಿದ್ದಾರೆ. ಬೌಲಿಂಗ್ನಲ್ಲಿ ಜೋ್ರಾ ಆರ್ಚರ್, ವಾನಿಂದು ಹಸರಂಗಗೆ ಇತರರಿಂದ ಸಮರ್ಥ ಬೆಂಬಲ ಸಿಗಬೇಕಿದೆ.
ಪ್ಲೇಆಫ್ ಲೆಕ್ಕಾಚಾರ...
ಆರ್ಸಿಬಿ ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 5 ಜಯ, 3 ಸೋಲಿನೊಂದಿಗೆ 10 ಅಂಕ ಕಲೆಹಾಕಿದೆ. ಆರ್ಸಿಬಿಗೆ ಇನ್ನೂ 6 ಲೀಗ್ ಪಂದ್ಯಗಳಿದ್ದು, ಈ ಪೈಕಿ 4 ಪಂದ್ಯ ತವರಿನಲ್ಲೇ ನಡೆಯಲಿವೆ. ಪ್ಲೇಆಫ್ಗೇರಲು ಇನ್ನೂ ಕನಿಷ್ಠ 3 ಜಯ ಬೇಕಿದ್ದು, ತವರಿನಲ್ಲೂ ಗೆಲುವಿನ ಲಯ ಕಂಡುಕೊಂಡರೆ ಹಾದಿ ಸುಗಮವಾಗಲಿದೆ. ಕೊನೇ 6 ಪಂದ್ಯಗಳಲ್ಲಿ ಆರ್ಆರ್, ಡಿಸಿ, ಸಿಎಸ್ಕೆ, ಎಲ್ಎಸ್ಜಿ, ಎಸ್ಆರ್ಎಚ್, ಕೆಕೆಆರ್ ಎದುರು ಆಡಲಿದೆ. ಮತ್ತೊಂದೆಡೆ ರಾಜಸ್ಥಾನ 8 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದು, 6ರಲ್ಲಿ ಸೋತಿದೆ. ಪ್ಲೇಆಫ್ಗೇರಲು ರಾಜಸ್ಥಾನ ಉಳಿದ 6 ಪಂದ್ಯಗಳಲ್ಲೂ ಗೆಲ್ಲಲೇಬೇಕಾಗಿದೆ. ಇನ್ನೊಂದು ಪಂದ್ಯ ಸೋತರೂ ಆರ್ಆರ್ ಪ್ಲೇಆಫ್ ರೇಸ್ನಿಂದ ಬಹುತೇಕ ಹೊರಬೀಳಲಿದೆ. ಕೊನೇ 6 ಪಂದ್ಯಗಳಲ್ಲಿ ಆರ್ಸಿಬಿ, ಜಿಟಿ, ಎಂಐ, ಕೆಕೆಆರ್, ಸಿಎಸ್ಕೆ ಮತ್ತು ಪಿಬಿಕೆಎಸ್ ವಿರುದ್ಧ ಆಡಲಿದೆ.
ತವರಲ್ಲಿ ಕೈಕೊಟ್ಟಿರುವ ಸ್ಪಿನ್ನರ್ಸ್
ಆರ್ಸಿಬಿ ತಂಡಕ್ಕೆ ತವರಿನಲ್ಲಿ ಸ್ಪಿನ್ನರ್ಗಳ ವೈಲ್ಯವೇ ಪ್ರಮುಖ ಹಿನ್ನಡೆ ಎನಿಸಿದೆ. ತವರಿನಿಂದ ಹೊರಗೆ 15 ವಿಕೆಟ್ ಕಬಳಿಸಿರುವ ಆರ್ಸಿಬಿ ಸ್ಪಿನ್ನರ್ಗಳು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಮೊದಲ 3 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಕಬಳಿಸಿದ್ದು, ಪ್ರತಿ ಓವರ್ಗೆ 9.6 ರನ್ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ವೇಗಿಗಳಾದ ಹ್ಯಾಸಲ್ವುಡ್, ಭುವನೇಶ್ವರ್ ಜತೆಗೆ ಈ ಬಾರಿ ಆರ್ಸಿಬಿ ಸ್ಪಿನ್ನರ್ಗಳೂ ಉತ್ತಮ ನಿರ್ವಹಣೆ ತೋರಬೇಕಾಗಿದೆ.
ಪಿಚ್ ರಿಪೋರ್ಟ್
ಚಿನ್ನಸ್ವಾಮಿ ಸ್ಟೇಡಿಯಂ ಪಿಚ್ ಕಳೆದ ಕೆಲ ಆವೃತ್ತಿಗಳಲ್ಲಿ ಬ್ಯಾಟಿಂಗ್ ಸ್ನೇಹಿಯಾಗಿ ರನ್ಮಳೆಗೆ ಸಾಯಾಗುತಿತ್ತು. ಆದರೆ ಈ ಬಾರಿ ಮೊದಲ 3 ಪಂದ್ಯಗಳಲ್ಲೂ 180 ಪ್ಲಸ್ ಮೊತ್ತ ದಾಖಲಾಗಿಲ್ಲ. ಮಳೆಯಿಂದಾಗಿ ಕಳೆದ ಪಂದ್ಯದ ವೇಳೆ ಪಿಚ್ ಸಂಪೂರ್ಣ ಬೌಲಿಂಗ್ ಸ್ನೇಹಿಯಾಗಿತ್ತು. ಆದರೆ ಉದ್ಯಾನನಗರಿಯಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗಿಲ್ಲ. ಹೀಗಾಗಿ ಈ ಬಾರಿ ಪಿಚ್ ಬ್ಯಾಟಿಂಗ್ಗೂ ಸಹಕಾರ ನೀಡುವ ನಿರೀಕ್ಷೆ ಇದೆ. ಎದುರಾಳಿ ರಾಜಸ್ಥಾನ ಪಾಳಯದಲ್ಲಿ ಸ್ಥಳಿಯ ತಾರೆ ರಾಹುಲ್ ದ್ರಾವಿಡ್ ಕೋಚ್ ಆಗಿದ್ದು, ಇಲ್ಲಿನ ಪಿಚ್ ಬಗ್ಗೆ ಅವರಿಗೂ ಹೆಚ್ಚಿನ ಜ್ಞಾನ ಇದೆ. ಹೀಗಾಗಿ ಉಭಯ ತಂಡಗಳಲ್ಲಿ ಯಾರು ಪಿಚ್ ಅನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವರು ಎಂಬುದು ನಿರ್ಣಾಯಕವಾಗಲಿದೆ.
ಮುಖಾಮುಖಿ: 32
ಆರ್ಸಿಬಿ: 16
ರಾಜಸ್ಥಾನ: 14
ರದ್ದು: 2
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.