

ಕೋಲ್ಕತ: ಐಪಿಎಲ್-17ರ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ಹಾಗೂ ಎರಡು ಬಾರಿಯ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ ತಂಡಗಳು ಮಂಗಳವಾರ ಈಡನ್ ಗಾರ್ಡನ್ಸ್ನಲ್ಲಿ ಪರಸ್ಪರ ಎದುರಾಗಲಿದ್ದು, ಗೆಲುವಿನ ಓಟ ಕಾಯ್ದುಕೊಳ್ಳುವ ಜತೆಗೆ ಅಗ್ರಸ್ಥಾನಕ್ಕಾಗಿ ಹೋರಾಟ ನಡೆಸಲಿವೆ.
ಉಭಯ ತಂಡಗಳು ಟೂರ್ನಿಯಲ್ಲಿ ಸಮತೋಲನದಿಂದ ಕೂಡಿದ್ದು, ಮಾಜಿ ಚಾಂಪಿಯನ್ಗಳ ಮುಖಾಮುಖಿ ಕುತೂಹಲ ಕೆರಳಿಸಿದೆ. ರಾಜಸ್ಥಾನ ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಕೊನೇ ಓವರ್ನಲ್ಲಿ ರೋಚಕ ಗೆಲುವು ದಾಖಲಿಸಿ ಆಡಿರುವ 6 ಪಂದ್ಯಗಳಲ್ಲಿ 5 ಗೆಲುವು, 1 ಸೋಲಿನೊಂದಿಗೆ 10 ಅಂಕ ಕಲೆಹಾಕಿದೆ. ಲಖನೌ ಎದುರು ಸುಲಭ ಗೆಲುವು ದಾಖಲಿಸಿ ಜಯದ ಹಾದಿಗೆ ಮರಳಿರುವ ಕೆಕೆಆರ್, ಆಡಿರುವ 5 ಪಂದ್ಯಗಳಲ್ಲಿ 4 ಗೆಲುವು, 1 ಸೋಲಿನೊಂದಿಗೆ 8 ಪಾಯಿಂಟ್ ಹೊಂದಿದೆ. ಸ್ಪಿನ್ನರ್ಗಳಿಗೆ ಹೆಚ್ಚಿನ ನೆರವು ಒದಗಿಸುವ ಅಂಗಣದಲ್ಲಿ ಉಭಯ ತಂಡಗಳ ಸ್ಪಿನ್ ವಿಭಾಗ ಪ್ರಮುಖ ಪಾತ್ರ ವಹಿಸಲಿದೆ. ಗೌತಮ್ ಗಂಭೀರ್ ಕೆಕೆಆರ್ ಮೆಂಟರ್ ಆದ ಬಳಿಕ ಹೊಸ ಪಾತ್ರದೊಂದಿಗೆ ಕಾಣಿಸಿಕೊಂಡಿರುವ ಸುನೀಲ್ ನಾರಾಯಣ್ ಪಂದ್ಯದ ಆಕರ್ಷಣೆ ಎನಿಸಲಿದ್ದಾರೆ.
ಫಾರ್ಮ್ನಲ್ಲಿ ಆರ್ಆರ್ ಬ್ಯಾಟರ್ಸ್
ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ಬಳಿಕ ಅದನ್ನು ಪುನಾರಾವರ್ತಿಸಲು ವಿಲವಾಗಿರುವ ರಾಜಸ್ಥಾನ ಈ ಬಾರಿ ಪ್ರಶಸ್ತಿ ಜಯಿಸುವ ಗುರಿ ಹೊಂದಿದ್ದು, ಆಟಗಾರರು ಭರ್ಜರಿ ಲಯದಲ್ಲಿದ್ದಾರೆ. ಗಾಯದ ಸಮಸ್ಯೆಯಿಂದ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಜೋಸ್ ಬಟ್ಲರ್, ಆರ್. ಅಶ್ವಿನ್ ಮರಳಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ನಾಯಕ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ (284 ರನ್) ಹಾಲಿ ಟೂರ್ನಿಯಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್ ಸಹ ಹಿಂದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಲಯ ಕಂಡುಕೊಂಡಿದ್ದಾರೆ. ಆರಂಭಿಕ ಮೂರು ಪಂದ್ಯಗಳ ಬಳಿಕ ಟ್ರೆಂಟ್ ಬೌಲ್ಟ್ ವಿಕೆಟ್ ಕಬಳಿಸುವಲ್ಲಿ ವೈಲ್ಯ ಕಂಡಿದ್ದಾರೆ. ಯಜುವೇಂದ್ರ ಚಾಹಲ್ ಗರಿಷ್ಠ ವಿಕೆಟ್ ಪಡೆದವರ ರೇಸ್ನಲ್ಲಿದ್ದಾರೆ.
ಲಯದಲ್ಲಿದೆ ಕೆಕೆಆರ್
ಫಿಲ್ ಸಾಲ್ಟ್ ಹಾಗೂ ಸುನೀಲ್ ನಾರಾಯಣ್ ಭರ್ಜರಿ ಫಾರ್ಮ್ನಲ್ಲಿದ್ದು, ಆರ್ಆರ್ ಬೌಲರ್ಗಳಿಗೆ ಕಠಿಣ ಪರೀಕ್ಷೆ ನೀಡಲಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್ ಕಳೆದ ಪಂದ್ಯದಲ್ಲಿ ಉತ್ತಮ ಜತೆಯಾಟ ನೀಡಿದರೂ ಸ್ಟ್ರೆ$ಕ್ರೇಟ್ ಮೇಲೆ ಗಮನಹರಿಸಬೇಕಿದೆ. ಇದು ಮಾತ್ರ ಕೆಕೆಆರ್ಗೆ ಹಿನ್ನಡೆ ಎನಿಸಿದೆ. ರಿಂಕು ಸಿಂಗ್ ಟೂರ್ನಿಯಲ್ಲಿ ಇನ್ನೂ ರನ್ ಹರಿಸಿಲ್ಲ. ಇದುವರೆಗೆ 63 ರನ್ ಮಾತ್ರ ಕಲೆಹಾಕಿದ್ದಾರೆ. ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್ ಫಾರ್ಮ್ಗೆ ಮರಳಿರುವುದು ಬೌಲಿಂಗ್ ಬಲ ಹೆಚ್ಚಿಸಿದ್ದು, ವೈಭವ್ ಆರೋರ, ಹರ್ಷಿತ್ ರಾಣಾ ಸಹ ಲಯದಲ್ಲಿದ್ದಾರೆ.
ಮುಖಾಮುಖಿ: 28
ರಾಜಸ್ಥಾನ:13
ಕೆಕೆಆರ್: 14
ರದ್ದು: 1
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ.