

ದುಬೈ: ಐಪಿಎಲ್ ನಂತರ ನಡೆಯಲಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ರೋಹಿತ್ ಶರ್ಮ ಅವರನ್ನು ಭಾರತ ತಂಡದಿಂದ ಕೈಬಿಟ್ಟಿರುವ ಬಗ್ಗೆ ಈಗಾಗಲೆ ಸಾಕಷ್ಟು ಗೊಂದಲಗಳು ಮೂಡಿವೆ. ಇದಕ್ಕೀಗ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಕಾರಣಗಳನ್ನು ವಿವರಿಸಿದ್ದಾರೆ. ವೈದ್ಯಕೀಯ ವರದಿಯ ಅನ್ವಯ ರೋಹಿತ್ ಮತ್ತೊಮ್ಮೆ ಗಾಯಗೊಳ್ಳುವ ಅಪಾಯವಿದ್ದ ಕಾರಣ ಅವರ ಪುನರಾಗಮನದ ಬಗ್ಗೆ ಯಾವುದೇ ಅವಸರ ಮಾಡದಿರಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಐಪಿಎಲ್ ಪಂದ್ಯದ ವೇಳೆ ರೋಹಿತ್ ಸ್ನಾಯುಸೆಳೆತದ ಸಮಸ್ಯೆ ಎದುರಿಸಿರುವ ಕಾರಣ ಮುಂಬೈ ಇಂಡಿಯನ್ಸ್ ತಂಡದ 3 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಈ ನಡುವೆ ಅವರು ಮುಂಬೈ ತಂಡದ ನೆಟ್ಸ್‌ನಲ್ಲಿ ಭಾಗವಹಿಸಿರುವ ಕಾರಣ, ನಿಜಕ್ಕೂ ಅವರನ್ನು ಫಿಟ್ನೆಸ್ ಕಾರಣದಿಂದಲೇ ಭಾರತ ತಂಡದಿಂದ ಕೈಬಿಡಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿತ್ತು.
ರೋಹಿತ್ ಶರ್ಮ ಅವರನ್ನು ಭಾರತ ತಂಡದಿಂದ ಹೊರಗಿಡುವ ನಿರ್ಧಾರವನ್ನು ಕೈಗೊಂಡಿದ್ದು ಆಯ್ಕೆಗಾರರು ಎಂದೂ ರವಿಶಾಸ್ತ್ರಿ ಸ್ಪಷ್ಟಪಡಿಸಿದ್ದಾರೆ. ಬಿಸಿಸಿಐ ವೈದ್ಯಕೀಯ ಸಮಿತಿ ನೀಡಿದ ವರದಿಯನ್ನು ಪರಿಶೀಲಿಸಿ ಆಯ್ಕೆಗಾರರು ರೋಹಿತ್ ಅವರನ್ನು ಕೈಬಿಟ್ಟಿದ್ದಾರೆ. ತಂಡ ಆಯ್ಕೆ ವಿಚಾರದಲ್ಲಿ ನನ್ನ ಪಾತ್ರವಿರಲಿಲ್ಲ ಎಂದು ರವಿಶಾಸ್ತ್ರಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಗಾಯದ ನಡುವೆ ಅವಸರದಿಂದ ಮರಳಿ ಕಣಕ್ಕಿಳಿಯುವ ಮೂಲಕ ವೃತ್ತಿಜೀವನದಲ್ಲಿ ಮಾಡಿದ ನಾನು ತಪ್ಪನ್ನೇ ಪುನರಾವರ್ತಿಸದಿರುವಂತೆ ರೋಹಿತ್‌ಗೆ ಕಿವಿಮಾತನ್ನೂ ಹೇಳಿರುವ ರವಿಶಾಸ್ತ್ರಿ, ‘ಗಾಯಗೊಂಡ ಎಲ್ಲ ಆಟಗಾರರಿಗೂ ಶೀಘ್ರವಾಗಿ ಚೇತರಿಸಿಕೊಂಡು ಸಾಧ್ಯವಾದಷ್ಟು ಬೇಗನೆ ಮರಳಿ ಕಣಕ್ಕಿಳಿಯುವ ಆತುರ ಇರುತ್ತದೆ. ಆದರೆ, ಶೇ. 100ರಷ್ಟು ಫಿಟ್ ಇದ್ದಾಗ ಮಾತ್ರ ಮತ್ತೆ ಆಡಲಿಳಿಯಬೇಕು’ ಎಂದಿದ್ದಾರೆ.
ಗಾಯಗೊಂಡ ಬಳಿಕ ಬೇಗನೆ ಮರಳಿ ಕಣಕ್ಕಿಳಿಯುವ ಆತುರದಿಂದ ನಾನು 1991ರಲ್ಲಿ ವೃತ್ತಿಜೀವನವನ್ನು ಕೊನೆಗೊಳಿಸಬೇಕಾಯಿತು. ಆಗ ನಾನು ಆಸ್ಟ್ರೇಲಿಯಾಕ್ಕೆ ತೆರಳಿ ಆಡಿದೆ. ಆದರೆ ನಾನಿನ್ನೂ 3-4 ತಿಂಗಳ ಕಾಲ ಬಿಡುವು ಪಡೆದುಕೊಳ್ಳಬೇಕಾಗಿತ್ತು. ಹಾಗಿದ್ದರೆ ನಾನು ಇನ್ನೂ 5 ವರ್ಷಗಳ ಕಾಲ ಭಾರತ ತಂಡದ ಪರ ಆಡಬಹುದಿತ್ತು ಎಂದು ಹೇಳಿದ್ದಾರೆ.