

ನವದೆಹಲಿ: 2024ರ ಟಿ20 ವಿಶ್ವಕಪ್ ಗೆದ್ದ ನಂತರ ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ(Rohit) ಅವರು, ಟೆಸ್ಟ್ ಕ್ರಿಕೆಟ್‌ನಿಂದ ಕೂಡ ಇದೀಗ ನಿವೃತ್ತಿ ಘೋಷಿಸುವ ಮನಸ್ಸು ಮಾಡಿದ್ದಾರೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಗಳಲ್ಲಿ ಬ್ಯಾಟಿಂಗ್ ವಿಫಲತೆ ಎದುರಿಸುತ್ತಿರುವ ರೋಹಿತ್ ಶರ್ಮಾ, ಕಳಪೆ ಪ್ರದರ್ಶನ ಹಿನ್ನೆಲೆ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಭಾರತ ಅಭಿಮಾನಿಗಳ ಮತ್ತು ಮಾಜಿ ಆಟಗಾರರ ಪರೋಕ್ಷ ಟೀಕೆಗಳಿಗೆ ಬೇಸರಗೊಂಡಿರುವ ರೋಹಿತ್, ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಅಂತಿಮ(5ನೇ ಟೆಸ್ಟ್) ಪಂದ್ಯದ ಬಳಿಕ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಿಂದ (ನಿವೃತ್ತಿ) ದೂರ ಸರಿಯಲಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಕಾಂಗೂರುಗಳ ವಿರುದ್ಧ ಟೆಸ್ಟ್ ಸರಣಿಗಳಲ್ಲಿ ಮೊದಲ ಪಂದ್ಯ ಗೆದ್ದು ಬಿಗಿದ್ದ ಟೀಂ ಇಂಡಿಯಾ ಬಳಿಕ ಗೆಲುವಿನ ಲಯಕ್ಕೆ ಮರಳಿಲ್ಲ. ಎರಡನೇ ಪಂದ್ಯ ಆಸ್ಟ್ರೇಲಿಯಾ ಗೆದ್ದಿದೆ. ಇನ್ನೂ ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಮೆಲ್ಬೋರ್ನ್ನಲ್ಲಿ ನಡೆದ ಟೆಸ್ಟ್‌ನಲ್ಲಿ 184 ರನ್‌ಗಳ ಅಂತರದಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತಿದೆ. ಈ ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಆಡಿದ ರೋಹಿತ್, ಒಂದೇ ಒಂದು ಒಳ್ಳೆಯ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ. ಸರಣಿಯುದ್ದಕ್ಕೂ ಕಳಪೆ ಪ್ರದರ್ಶನ ತೋರಿದ ಶರ್ಮಾ 31 ರನ್ ಪೆರಿಸಲಷ್ಟೇ ಸಾಧ್ಯವಾಗಿದೆ.
ಕಳೆದ ವರ್ಷದಲ್ಲಿ ರೋಹಿತ್ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಪ್ರಿಯರ ಗಮನ ಸೆಳೆದಿದ್ದರು. ಆದರೆ, ಈ ಬಾರಿ(ಈ ವರ್ಷ) ರೋಹಿತ್ ಎರಡು ಶತಕ ಹಾಗೂ ಎರಡು ಅರ್ಧ ಶತಕಗಳಿಸಲಷ್ಟೇ ಶಕ್ತರಾಗಿದ್ದಾರೆ. ಅಲ್ಲದೇ, ಈ ಪಂದ್ಯದುದ್ದಕ್ಕೂ ಸ್ಟಾರ್ ಬ್ಯಾಟರ್ ಕಿಂಗ್ ಕೊಹ್ಲಿ ಕೂಡ ಕಳಪೆ ಪ್ರದರ್ಶನ ನೀಡಿದ್ದು, ಇದಕ್ಕೂ ಭಾರಿ ಟೀಕೆಗಳು ವ್ಯಕ್ತವಾಗಿವೆ. ಕೊಹ್ಲಿ ನಿವೃತ್ತಿಯ ಕೂಗು ಕೇಳಿ ಬರುತ್ತಿದೆ.
WTC Final
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಟೀಮ್ ಇಂಡಿಯಾದ ಹಾದಿ ಹೆಚ್ಚು ಜಟಿಲವಾಗಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ಸೋತಿದೆ. ಹೌದು, ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮ ಪಡೆ 184 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. 340 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ 79.1 ಓವರ್‌ಗಳಲ್ಲಿ 155 ರನ್‌ಗಳಿಗೆ ಕುಸಿದು ಬಿತ್ತು. ಯಶಸ್ವಿ ಜೈಸ್ವಾಲ್ (84 ರನ್ 208 ಎಸೆತ, 8 ಬೌಂಡರಿ) ಹೆಚ್ಚು ರನ್ ಗಳಿಸಿದ ಭಾರತದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಸೋಲು ಅನುಭವಿಸುವ ಮೂಲಕ ಭಾರತ ತಂಡ ಡಬ್ಲ್ಯುಟಿಸಿ ಫೈನಲ್ ತಲುಪುವ ಸಾಧ್ಯತೆ ಇನ್ನಷ್ಟು ಜಟಿಲವಾಗಿದೆ. ಸದ್ಯ ಡಬ್ಲ್ಯುಟಿಸಿ ಫೈನಲ್ ತಲುಪಲು ಭಾರತಕ್ಕೆ ಇರುವುದು ಒಂದೇ ದಾರಿ. ಜನವರಿ 3ರಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ಐದನೇ ಟೆಸ್ಟ್ ಪಂದ್ಯವನ್ನು ಭಾರತ ಗೆಲ್ಲಲೇಬೇಕು. ಆಗ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ 2-2ರಲ್ಲಿ ಸಮಬಲಗೊಳ್ಳಲಿದೆ. ಅದೇ ಸಮಯದಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಶ್ರೀಲಂಕಾ ಗೆಲ್ಲಬೇಕಾಗಿದೆ. ಆದರೆ, ಆಸ್ಟ್ರೇಲಿಯಾದ ಪ್ರಸ್ತುತ ಫಾರ್ಮ್ ಅನ್ನು ಗಮನಿಸಿದರೆ, ವೈಟ್‌ವಾಷ್ ಮಾಡುವುದು ಸ್ವಲ್ಪ ಕಷ್ಟವೇ. ಹೀಗಾಗಿ ಟೀಮ್ ಇಂಡಿಯಾ ಫೈನಲ್ ತಲುಪುವ ಸಾಧ್ಯತೆ ಬಹುತೇಕ ಕಷ್ಟವಾಗಿದೆ. (ಏಜೆನ್ಸಿಸ್)