

ನವದೆಹಲಿ: ಸತತ 10 ಗೆಲುವಿನ ಯಶಸ್ವಿ ಓಟದ ನಡುವೆಯೂ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡಲು ಶಕ್ತರಾಗದ ರೋಹಿತ್ ಶರ್ಮ ಏಕದಿನ ಮತ್ತು ಟೆಸ್ಟ್ ತಂಡದ ನಾಯಕರಾಗಿ ಮುಂದುವರಿಯುವ ನಿರೀಕ್ಷೆ ಇದೆ. ಆದರೆ ಅವರು ಇನ್ನು ಮುಂದೆ ಭಾರತ ಪರ ಟಿ20 ಪಂದ್ಯ ಆಡುವುದು ಅನುಮಾನವೆನಿಸಿದೆ. 2022ರ ನವೆಂಬರ್ನಲ್ಲಿ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಹೊರಬಿದ್ದ ಬಳಿಕ ರೋಹಿತ್ ಭಾರತ ತಂಡದ ಪರ ಯಾವುದೇ ಚುಟುಕು ಕ್ರಿಕೆಟ್ ಪಂದ್ಯ ಆಡಿಲ್ಲ. ನಂತರದಲ್ಲಿ ಹಾರ್ದಿಕ್ ಪಾಂಡ್ಯ ಹೆಚ್ಚಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ.
"ಇದೇನು ಹೊಸ ಬೆಳವಣಿಗೆಯಲ್ಲ. ಟಿ20 ವಿಶ್ವಕಪ್ ನಂತರದಲ್ಲಿ ರೋಹಿತ್ ಸಂಪೂರ್ಣವಾಗಿ ಏಕದಿನ ವಿಶ್ವಕಪ್ನತ್ತ ಗಮನಹರಿಸಿದ್ದರು. ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಜತೆಗೂ ಈ ಬಗ್ಗೆ ಚರ್ಚಿಸಿದ್ದರು. ರೋಹಿತ್ ಸ್ವತಃ ಟಿ20 ತಂಡದಿಂದ ಹೊರಗುಳಿದಿದ್ದರು' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 36 ವರ್ಷದ ರೋಹಿತ್ ಇದುವರೆಗೆ 148 ಟಿ20 ಪಂದ್ಯ ಆಡಿದ್ದು, 4 ಶತಕಗಳ ಸಹಿತ 3,853 ರನ್ ಸಿಡಿಸಿದ್ದಾರೆ.
ಈಗಾಗಲೆ ಐಪಿಎಲ್ನಲ್ಲೂ ಮಿಂಚಿರುವ ನಾಲ್ವರು ಆರಂಭಿಕರಾದ ಶುಭಮಾನ್ ಗಿಲ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಈಗಾಗಲೆ ಟಿ20 ವಿಶ್ವಕಪ್ ತಂಡದ ರೇಸ್ನಲ್ಲಿದ್ದಾರೆ. ಒಂದು ವೇಳೆ ಇವರು ನಿರೀಕ್ಷಿತ ನಿರ್ವಹಣೆ ತೋರದಿದ್ದರೆ ಮಾತ್ರ ಆಯ್ಕೆಗಾರರು, ರೋಹಿತ್ಗೆ ನಿಲುವು ಬದಲಾಯಿಸುವಂತೆ ಕೇಳಿಕೊಳ್ಳಬಹುದು ಎನ್ನಲಾಗಿದೆ. ಇನ್ನು ವೃತ್ತೀಜಿವನದ ಈ ಹಂತದಲ್ಲಿ ರೋಹಿತ್ ಕಾರ್ಯದೊತ್ತಡ ತಗ್ಗಿಸುವತ್ತ ಗಮನಹರಿಸಲಿದ್ದು, ಎಲ್ಲ 3 ಪ್ರಕಾರದಲ್ಲಿ ಆಡುವುದು ಕಷ್ಟವೂ ಆಗಲಿದೆ. 2023ರ ಡಿಸೆಂಬರ್ನಿಂದ 2024ರ ಮಾರ್ಚ್ ವರೆಗೆ ಭಾರತ 7 ಟೆಸ್ಟ್ ಆಡಲಿದ್ದು, ಇದರತ್ತ ರೋಹಿತ್ ಹೆಚ್ಚಿನ ಗಮನಕೇಂದ್ರಿಕರಿಸಲಿದ್ದು, 2025ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಭಾರತ ತಂಡವನ್ನು ಕೊಂಡೊಯ್ಯುವುದು ಪ್ರಮುಖ ಗುರಿ ಆಗಿರಲಿದೆ.