

ಮೆಲ್ಬೋರ್ನ್: ನಾಯಕ ರೋಹಿತ್ ಶರ್ಮ ಬಾಕ್ಸಿಂಗ್ ಡೇ ಟೆಸ್ಟ್ 2ನೇ ಇನಿಂಗ್ಸ್ನಲ್ಲೂ ವಿಲರಾದ ಬಳಿಕ ಅವರ ನಿವೃತ್ತಿಯ ಬಗ್ಗೆ ಮತ್ತೆ ಬಿಸಿಬಿಸಿ ಚರ್ಚೆಗಳು ನಡೆದವು. ಆದರೆ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 37 ವರ್ಷದ ರೋಹಿತ್, ನಿವೃತ್ತಿಯ ಬಗ್ಗೆ ಯೋಚನೆಯನ್ನು ತಳ್ಳಿಹಾಕಿದರು. ನಿವೃತ್ತಿಯ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸದಿದ್ದರೂ, ಮೆಲ್ಬೋರ್ನ್ ಪಂದ್ಯ ತನ್ನ ಕೊನೇ ಟೆಸ್ಟ್ ಅಲ್ಲವೆಂಬುದನ್ನು ಸ್ಪಷ್ಟಪಡಿಸಿದರು.
ಸರಣಿಯ 6 ಇನಿಂಗ್ಸ್ಗಳಲ್ಲಿ ಕೇವಲ 31 ರನ್ ಗಳಿಸಿರುವ ರೋಹಿತ್, ತನ್ನ ಬ್ಯಾಟಿಂಗ್ ಫಾರ್ಮ್ನತ್ತ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡರು. ನನಗ ಸಾಧಿಸಬೇಕೆನಿಸಿದ್ದನ್ನು ಸಾಧಿಸಲು ಸಾಧ್ಯವಾಗದ ಬಗ್ಗೆ ಬೇಸರವಿದೆ ಎಂದ ರೋಹಿತ್, ಸಿಡ್ನಿ ಟೆಸ್ಟ್ನಲ್ಲಿ ಪುಟಿದೇಳುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಸಿಡ್ನಿ ಟೆಸ್ಟ್ನಲ್ಲಿ ಕೊನೇ ಆಟ?
ರೋಹಿತ್ ಶರ್ಮ ನಿವೃತ್ತಿ ನಿರಾಕರಿಸಿದರೂ ಮುಂಬರುವ ಸಿಡ್ನಿಯ ಪಂದ್ಯ ಅವರ ಪಾಲಿಗೆ ಕೊನೇ ಟೆಸ್ಟ್ ಆಗುವ ಸಾಧ್ಯತೆ ಹೆಚ್ಚಿದೆ. ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಅರ್ಹತೆ ಗಳಿಸದಿದ್ದರೆ ಈ ಸಾಧ್ಯತೆ ಇನ್ನಷ್ಟು ಹೆಚ್ಚಾಗಲಿದೆ. ಯಾಕೆಂದರೆ ಭಾರತ ತಂಡ ಈ ಸರಣಿಯ ನಂತರ ಮುಂದಿನ ಸರಣಿ ಆಡಲಿರುವುದು ಮುಂದಿನ ವರ್ಷ ಜೂನ್ 20ರಿಂದ. 5 ಪಂದ್ಯಗಳ ಈ ಸರಣಿ ಮುಂದಿನ 2025-27ರ ಸಾಲಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಮೊದಲ ಸವಾಲು ಆಗಿರಲಿದೆ. ಹೀಗಾಗಿ ಭಾರತ ಭವಿಷ್ಯದ ದೃಷ್ಟಿಯಿಂದ ಮುಂದಿನ ಡಬ್ಲ್ಯುಟಿಸಿ ಆವೃತ್ತಿಯಲ್ಲಿ ಹೊಸ-ಯುವ ಆಟಗಾರರಿಗೆ ಅವಕಾಶ ಕಲ್ಪಿಸಲು ಮುಂದಾಗಬಹುದು. ಆದರೆ ಭಾರತ ಡಬ್ಲ್ಯುಟಿಸಿ ಫೈನಲ್ಗೆ ಅರ್ಹತೆ ಪಡೆದರೆ ರೋಹಿತ್ಗೆ ಅದರಲ್ಲಿ ಆಡುವ ಅವಕಾಶ ಲಭಿಸಬಹುದು ಎನ್ನಲಾಗಿದೆ. ಒಟ್ಟಾರೆ ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಕೋಚ್ ಗೌತಮ್ ಗಂಭೀರ್, ರೋಹಿತ್ಗೆ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸೂಚಿಸುವ ನಿರೀಕ್ಷೆ ಇದೆ. ಆದರೆ ಏಕದಿನ ಕ್ರಿಕೆಟ್ನಲ್ಲಿ ರೋಹಿತ್ 2025ರ ಚಾಂಪಿಯನ್ಸ್ ಟ್ರೋಫಿ ಬಳಿಕವೂ ಮುಂದುವರಿಯುವ ನಿರೀಕ್ಷೆ ಇದೆ.
*ವಿರಾಟ್ ಕೊಹ್ಲಿ ಇನ್ನೂ 3-4 ವರ್ಷಗಳ ಕಾಲ ಕ್ರಿಕೆಟ್ ಆಡಬಹುದು. ಆದರೆ ರೋಹಿತ್ ಶರ್ಮ ಭವಿಷ್ಯದ ಬಗ್ಗೆ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಸಮಯ ಬಂದಿದೆ. ಹಾಲಿ ಸರಣಿಯ ನಂತರದಲ್ಲಿ ಅವರು ನಿರ್ಧಾರವನ್ನು ಸ್ಪಷ್ಟಪಡಿಸಬೇಕಾಗುತ್ತದೆ.
| ರವಿಶಾಸ್ತ್ರಿ