Rohit Sharma ಪಾಲಿಗೆ ಬಾರ್ಡರ್​-ಗವಾಸ್ಕರ್ ಟ್ರೋಫಿ ಕೊನೆಯಾಗಲಿದೆಯೇ? ಸತತ ವೈಫಲ್ಯದ ಬೆನ್ನಲ್ಲೇ ನಿವೃತ್ತಿ ಘೋಷಿಸುವಂತೆ ಆಗ್ರಹ

Rohit Sharma
Published on

ಮೆಲ್ಬೋರ್ನ್​: ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಬಾರ್ಡರ್​-ಗವಾಸ್ಕರ್ ಟ್ರೋಫಿ ಟೆಸ್ಟ್​ ಸರಣಿಯಲ್ಲಿ ಭಾರತ ತಂಡ ನೀರಸ ಪ್ರದರ್ಶನ ತೋರುತ್ತಿದ್ದು, ಮುಂಬರುವ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಹಾದಿ ಕಷ್ಟ ಎಂದು ಹೇಳಲಾಗಿದೆ. ಇನ್ನೂ ಟೆಸ್ಟ್​ ಸರಣಿಗಳ ವಿಚಾರಕ್ಕೆ ಬರುವುದಾದರೆ ನಾಯಕ ರೋಹಿತ್ ಶರ್ಮ (Rohit Sharma) ಅವರು ಬ್ಯಾಟಿಂಗ್​ ಲಯ ಕಂಡುಕೊಳ್ಳದೆ ಇರುವುದು ತಂಡದ ಮ್ಯಾನೇಜ್​ಮೆಂಟ್​ಅನ್ನು ಚಿಂತೆಗೆ ದೂಡಿದ್ದು, ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರೆದಿದೆ.

ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ ಸತತ ವೈಫಲ್ಯ ಅನುಭವಿಸಿರುವ ರೋಹಿತ್​ ಶರ್ಮ (Rohit Sharma) ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲೂ ಕೂಡ ತೀವ್ರ ಮುಖಭಂಗವನ್ನು ಅನುಭವಿಸಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿಯುವ ಸಲುವಾಗಿ ತಂಡದಲ್ಲಿ ಬದಲಾವಣೆ ಮಾಡಿದ್ದರು. ಆದರೆ, ನಾಲ್ಕನೇ ಟೆಸ್ಟ್​ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದ ರೋಹಿತ್​ಗೆ ನಿವೃತ್ತಿ ಘೋಷಿಸುವಂತೆ ಆಗ್ರಹ ಕೇಳಿ ಬರುತ್ತಿದ್ದು, ಇವರ ಕ್ಯಾಪ್ಟನ್ಸಿ ವಿರುದ್ಧವೂ ಕ್ರೀಡಾಭಿಮಾನಿಗಳು ಕಿಡಿಕಾರುತ್ತಿದ್ಧಾರೆ.

ರೋಹಿತ್​ ಫಾರ್ಮ್​ ಕುರಿತಂತೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಮಾರ್ಕ್​ ವಾಗ್​, ರೋಹಿತ್ ಶರ್ಮಾ (Rohit Sharma) ಕೊನೆಯ ಮೂರು ಇನ್ನಿಂಗ್ಸ್‌ಗಳಲ್ಲಿ ಏನನ್ನಾದರೂ ಮಾಡದಿದ್ದರೆ, ಅವರ ವೃತ್ತಿಜೀವನವು ಖಂಡಿತವಾಗಿಯೂ ಅಂತ್ಯಗೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ. ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ರೋಹಿತ್​ ತಪ್ಪಾದ ಶಾಟ್​ ಸೆಲೆಕ್ಷನ್​ನಿಂದ ಔಟಾದರು. ಭಾರತೀಯ ನಾಯಕನಿಗೆ ಇದು ದುಃಖದ ಸ್ಥಿತಿಯಾಗಿದ್ದು, ಮುಂಬರುವ ಮೂರು ಇನ್ನಿಂಗ್ಸ್​ನಲ್ಲಿ ಅವರು ನಿರೂಪಿಸಬೇಕಿದೆ ಎಂದು ಹೇಳಿದ್ಧಾರೆ. 

Rohit Sharma

ಟೆಸ್ಟ್​ ಕ್ರಿಕೆಟ್​ನಲ್ಲಿ  ರೋಹಿತ್​ ಶರ್ಮ (Rohit Sharma) ಪ್ರದರ್ಶನವನ್ನು ನೋಡುವುದಾದರೆ ಕಳೆದ 14 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ಅವರ ಫಾರ್ಮ್ ತುಂಬಾ ಕಳಪೆಯಾಗಿದೆ. ಕಳೆದ 14 ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 155 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಅವಧಿಯಲ್ಲಿ, ಅವರ ಸರಾಸರಿ ಕೇವಲ 11.07 ಆಗಿದ್ದು, ಒಮ್ಮೆ ಮಾತ್ರ 50 ರನ್ ಗಡಿ ದಾಟಿದ್ದಾರೆ. ಹೀಗಿರುವಾಗ ನಾಯಕನ ಜೊತೆಗೆ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಈಗ ಹಲವು ಪ್ರಶ್ನೆಗಳು ಎದ್ದಿವೆ.

ಇದಲ್ಲದೆ ರೋಹಿತ್​ (Rohit Sharma) ನಾಯಕತ್ವದ ಬಗ್ಗೆಯೂ ಅಪಸ್ವರ ಕೇಳಿ ಬಂದಿದ್ದು, ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಹಿಟ್​ಮ್ಯಾನ್​ ಮಾಡಿದ ಎಡವಟ್ಟು ಇದಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಸ್ಪಿನ್ನರ್‌ಗಳಿಗೆ ವಿಕೆಟ್ ಸಹಕಾರಿಯಾಗುತ್ತಿದ್ದರೂ ರೋಹಿತ್ ವೇಗದ ಬೌಲಿಂಗ್​ಗೆ ರೋಹಿತ್​ ಹೆಚ್ಚು ಒತ್ತು ನೀಡಿರುವುದು ಇದಕ್ಕೆ ಪ್ರಮುಖ ಸಾಕ್ಷಿಯಾಗಿದೆ. ವಾಷಿಂಗ್ಟನ್​ ಸುಂದರ್​ರನ್ನು ತಂಡದಲ್ಲಿ ಸೇರಿಸಿಕೊಂಡಿದರಾದರು ಹೆಚ್ಚು ಬಳಸಿಕೊಳ್ಳದೇ ಇರುವುದು ರೋಹಿತ್​ ಕ್ಯಾಪ್ಟನ್ಸಿ ವಿರುದ್ಧವೂ ಅಪಸ್ವರ ಎತ್ತಲು ಕಾರಣವಾಗಿದೆ.

ಈ ವಿಚಾರವಾಗಿ ರೋಹಿತ್​ಗೆ ಮಾಜಿ ಕ್ರಿಕೆಟಿಗರು, ಕ್ರೀಡಾಭಿಮಾನಿಗಳು ಸೇರಿದಂತೆ ಹಲವರು ನಿವೃತ್ತಿ ಪಡೆಯುವಂತೆ ಸೂಚಿಸುತ್ತಿದ್ದು, ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯು ರೋಹಿತ್​ (Rohit Sharma) ಪಾಲಿಗೆ ನಿರ್ಣಾಯಕ ಎಂದು ಹೇಳಲಾಗಿದೆ. ಮೊದಲ ಪಂದ್ಯದಲ್ಲಿ ತಂಡಕ್ಕೆ 295 ರನ್​ಗಳ ಭರ್ಜರಿ ಜಯ ತಂದುಕೊಟ್ಟಿದ್ದ ವೇಗಿ ಬುಮ್ರಾಗೆ ನಾಯಕತ್ವವನ್ನು ನೀಡುವಂತೆ ಆಗ್ರಹ ಕೇಳಿ ಬರುತ್ತಿದ್ದು, ಸರಣಿ ಮುಗಿದ ಬಳಿಕ ಅಂತಿಮ ಚಿತ್ರ ಹೊರಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net