ಈ ಬದಲಾವಣೆ ರೋಹಿತ್ ಶರ್ಮಗೆ ಅಗತ್ಯ! ಮುಂದಿನ ಪಂದ್ಯದಲ್ಲಿ ಓಪನಿಂಗ್ ಆಡಬೇಡಿ ಎಂದ ಮಾಜಿ ಆಯ್ಕೆಗಾರ

ವಿಜಯವಾಣಿ - 2024-12-03T103824.347
Published on

ನವದೆಹಲಿ: ಪಸ್ತುತ ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ಭಾಗಿಯಾಗಿರುವ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಪಿಂಕ್ ಬಾಲ್​ ಟೆಸ್ಟ್​ ಆಡುತ್ತಿದೆ. ಸದ್ಯ ಮೊದಲ ಮ್ಯಾಚ್​ ಗೆದ್ದು ಬೀಗಿರುವ ಭಾರತ, ಆಡಿಲೇಡ್​ ಓವಲ್​ನಲ್ಲಿ ದ್ವಿತೀಯ ಟೆಸ್ಟ್​ ಆಡಲು ಸಜ್ಜಾಗಿದೆ. ತಂಡಕ್ಕೆ ಯಶಸ್ವಿ ಜೈಸ್ವಾಲ್​, ಕೆ.ಎಲ್. ರಾಹುಲ್​ ಮತ್ತು ವಿರಾಟ್​ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ಆಸರೆ ಒಂದೆಡೆಯಾದರೆ, ಜಸ್ಪ್ರಿತ್​ ಬುಮ್ರಾ ಬೌಲಿಂಗ್ ದಾಳಿ ಮತ್ತೊಂದೆಡೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕ ಬ್ಯಾಟರ್​ ಆಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್​ ಮತ್ತು ಕೆ.ಎಲ್. ರಾಹುಲ್, ಉತ್ತಮ ಜತೆಯಾಟದಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 77 ರನ್ ಸಿಡಿಸಿದ ರಾಹುಲ್​, ಜೈಸ್ವಾಲ್​ ಜತೆಗೂಡಿ 201 ರನ್​ಗಳ ಅಮೋಘ ಜತೆಯಾಟ ನೀಡಿದರು. ಇವರಿಬ್ಬರ ಪ್ರದರ್ಶನ ಹಾಗೂ ಕ್ಯಾಪ್ಟನ್ ರೋಹಿತ್ ಬ್ಯಾಟಿಂಗ್​ ಗಮನಿಸಿದ ಭಾರತದ ಮಾಜಿ ಆಯ್ಕೆಗಾರ ದೇವಂಗ್ ಗಾಂಧಿ, ರೋಹಿತ್​ ಈಗಿರುವ ತಮ್ಮ ಸ್ಥಾನವನ್ನು ಬದಲಿಸಬೇಕಿದೆ ಎಂದಿದ್ದಾರೆ.

"ನನ್ನ ಪ್ರಕಾರ, ರೋಹಿತ್ ಶರ್ಮ ಓಪನಿಂಗ್ ಬರೋದು ಬೇಡ. ಆರಂಭಿಕ ಆಟಗಾರರಾಗಿ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ಕಣಕ್ಕಿಳಿಯಲಿ. ಆರಂಭಿಕನಾಗಿ ಬರುವ ರೋಹಿತ್​, ಆರನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ. ಐದನೇ ಕ್ರಮಾಂಕದಲ್ಲಿ ಬರಬಹುದಿತ್ತು. ಆದರೆ, ರಿಷಭ್ ಪಂತ್​ ಆ ಸ್ಥಾನದಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಐದನೇ ಸ್ಲಾಟ್​ ಪಂತ್​ಗೆ ಸರಿಯಾಗಿ ಹೊಂದುತ್ತದೆ. ಹೀಗಾಗಿ ರೋಹಿತ್ ಆರನೇ ಕ್ರಮಾಂಕದಲ್ಲಿ ಬರುವುದು ಒಳಿತು. ತಮ್ಮ ಕರಿಯರ್​ನಲ್ಲಿ ರೋಹಿತ್​ ಆರಂಭಿಸಿದ್ದು 6ನೇ ಬ್ಯಾಟರ್​ ಆಗಿಯೇ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net