

ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್ಗಳ ಜಯ ಸಾಧಿಸುವ ಮೂಲಕ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದು, ಈ ಮೂಲಕ ಆಸೀಸ್ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ದುಬೈ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಉಪಾಂತ್ಯ ಕಾದಾಟದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ಗೆ ಇಳಿಯಿತು. ನಾಯಕ ಸ್ಟೀವನ್ ಸ್ಮಿತ್ (73 ರನ್, 96 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಎಡಗೈ ಬ್ಯಾಟರ್ ಅಲೆಕ್ಸ್ ಕ್ಯಾರಿ (61 ರನ್, 57 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ನಡುವೆಯೂ ಭಾರತೀಯರ ಸಂಘಟಿತ ದಾಳಿಗೆ ನಲುಗಿದ ಆಸೀಸ್ 49.3 ಓವರ್‌ಗಳಲ್ಲಿ 264 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ 43 ರನ್‌ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತು. ಆಗ 36 ವರ್ಷದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ (45 ರನ್, 62 ಎಸೆತ, 3 ಬೌಂಡರಿ) ಅಮೂಲ್ಯ ಜತೆಯಾಟದ ಮೂಲಕ ಚೇಸಿಂಗ್‌ಗೆ ಬಲ ತುಂಬಿದರು. ಕೊನೆಯಲ್ಲಿ ವಿಕೆಟ್ ಕೀಪರ್-ಬ್ಯಾಟರ್, ಕನ್ನಡಿಗ ಕೆಎಲ್ ರಾಹುಲ್ (42* ರನ್, 34 ಎಸೆತ, 2 ಬೌಂಡರಿ, 2 ಸಿಕ್ಸರ್) ಸಮಯೋಚಿತ ಆಟದ ನೆರವಿನಿಂದ ಭಾರತ 48.1 ಓವರ್‌ಗಳಲ್ಲಿ 6 ವಿಕೆಟ್‌ಗೆ 267 ರನ್‌ಗಳಿಸಿ ಗೆಲುವು ಒಲಿಸಿಕೊಂಡಿತು.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ ಭರ್ಜರಿ ಗೆಲುವಿನ ಓಟ ಮುಂದುವರಿಸಿರುವ ಟೀಮ್ ಇಂಡಿಯಾ, 8 ವರ್ಷಗಳ ಬಳಿಕ ಪುನಾರಂಭಗೊಂಡಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಸತತ ಮೂರನೇ ಹಾಗೂ ಒಟ್ಟಾರೆ ಐದನೇ ಬಾರಿಗೆ ಫೈನಲ್‌ಗೇರಿದೆ. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ (84 ರನ್, 98 ಎಸೆತ, 5 ಬೌಂಡರಿ) ಸಮಯೋಚಿತ ಆಟ ಹಾಗೂ ವೇಗಿ ಮೊಹಮದ್ ಶಮಿ (48ಕ್ಕೆ 3) ಸಹಿತ ಇತರ ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಭಾರತ ತಂಡ ಮೊದಲ ಸೆಮಿಫೈನಲ್‌ನಲ್ಲಿ ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಎದುರು 4 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ರೋಹಿತ್ ಶರ್ಮ ಬಳಗ 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ನೋವನ್ನು ಕಡಿಮೆಗೊಳಿಸಿದೆ. ನ್ಯೂಜಿಲೆಂಡ್ ಹಾಗೂ ದ.ಆಫ್ರಿಕಾ ನಡುವಿನ ವಿಜೇತರ ಎದುರು ಭಾರತ ತಂಡ ಭಾನುವಾರ ದುಬೈನಲ್ಲೇ ಪ್ರಶಸ್ತಿಗಾಗಿ ಕಾದಾಡಲಿದೆ.
ಭಾರತ ತಂಡವನ್ನು ಫೈನಲ್ಗೇರಿಸುವ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ವಿಶೇಷ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಐಸಿಸಿಯ ಪ್ರಮುಖ ನಾಲ್ಕು ಟೂರ್ನಿಗಳಲ್ಲಿ ತಂಡವನ್ನು ಫೈನಲ್ಗೇರಿಸಿದ ನಾಯಕ ಎಂಬ ಖ್ಯಾತಿಗೆ ರೋಹಿತ್ ಶರ್ಮ ಪಾತ್ರರಾಗಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡಿರುವ ರೋಹಿತ್ ಶರ್ಮ ಈ ಸಾಧನೆ ಮಾಡಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರೋಹಿತ್ ಶರ್ಮ (Rohit Sharma) ನಾಯಕತ್ವದಲ್ಲಿ ಭಾರತ ತಂಡವು 2023ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು. 2024ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ತಂಡವನ್ನು ಚಾಂಪಿಯನ್ ಆಗಿಸಿದ್ದರು. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡ ಅಜೇಯವಾಗಿ ಫೈನಲ್ಗೆ ಲಗ್ಗೆ ಇಟ್ಟಿದ್ದು, ನಾಯಕನಾಗಿ ಹಿಟ್ಮ್ಯಾನ್ ಹೊಸ ದಾಖಲೆಯನ್ನು ಬರೆದಿದ್ದಾರೆ.